ಇಸ್ಲಾಮಾಬಾದ್: ಭಾರತೀಯ ಸೇನಾಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ‘ಬೇಜವಾಬ್ದಾರಿಯುತ’ ಹೇಳಿಕೆಗಳನ್ನು ನೀಡುವ ಮೂಲಕ ಪದೇ ಪದೇ ‘ಯುದ್ಧಕ್ಕೆ ಪ್ರಚೋದನೆ ನೀಡುತ್ತಿದ್ದಾರೆ’ ಎಂದು ಪಾಕಿಸ್ತಾನ ಸೇನೆಯ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಹೇಳಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಕುರಿತು ರಾವತ್ ಶುಕ್ರವಾರ ನೀಡಿದ್ದ ಹೇಳಿಕೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಗಫೂರ್ ಅವರ ಹೇಳಿಕೆಗೆ ಭಾರತೀಯ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಸುಳ್ಳು ಹಾಗೂ ಆರೋಪಗಳಿಗೆ ನಾವು ಪ್ರತಿಕ್ರಿಯಿಸುವುದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿಯಲ್ಲಿ ಶುಕ್ರವಾರ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಸ್ಮರಣಾರ್ಥ ಆಯೋಜಿಸಿದ್ದ ಉಪನ್ಯಾಸದ ವೇಳೆ ಮಾತನಾಡಿದ ರಾವತ್, ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಪಾಕಿಸ್ತಾನದ ನಿಯಂತ್ರಣದಲ್ಲಿ ಇಲ್ಲ. ವಾಸ್ತವವಾಗಿ ಪಿಒಕೆ, ಪಾಕಿಸ್ತಾನದ ಭಯೋತ್ಪಾದಕರ ನಿಯಂತ್ರಣದಲ್ಲಿದೆ. ಗಿಲ್ಗಿಟ್–ಬಾಲ್ಟಿಸ್ತಾನ ಹಾಗೂ ಪಿಒಕೆಯನ್ನು ಪಾಕಿಸ್ತಾನ ಅಕ್ರಮವಾಗಿ ತನ್ನ ವಶದಲ್ಲಿ ಇರಿಸಿಕೊಂಡಿದೆ’ ಎಂದು ಹೇಳಿದ್ದರು. ಜತೆಗೆ, ಕಾಶ್ಮೀರದಲ್ಲಿ ಸಹಜ ಸ್ಥಿತಿ ಮರಳಲು ಪಾಕಿಸ್ತಾನ ಸೇನೆ ಅಡ್ಡಿಉಂಟು ಮಾಡುತ್ತಿದೆ ಎಂದು ಸಹ ಹೇಳಿದ್ದರು.
ಇದನ್ನೂ ಓದಿ...ಪಿಒಕೆ ಉಗ್ರರ ನಿಯಂತ್ರಣದಲ್ಲಿದೆ ಜ.ರಾವತ್
ಪಾಕ್ ಭಯೋತ್ಪಾದನೆಯ ಸಮಕಾಲೀನ ಕೇಂದ್ರಬಿಂದು (ಬಾಕು ವರದಿ): ಪಾಕಿಸ್ತಾನ ಭಯೋತ್ಪಾದನೆಯ ‘ಸಮಕಾಲೀನ ಕೇಂದ್ರಬಿಂದು’ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ.
‘ಪಾಕಿಸ್ತಾನ ತನ್ನ ಹಾಗೂ ನೆರೆರಾಷ್ಟ್ರಗಳ ಒಳಿತಿಗಾಗಿ ಭಯೋತ್ಪಾದನೆಯನ್ನು ತ್ಯಜಿಸಬೇಕು’ ಎಂದು ತಿಳಿಸಿದ್ದಾರೆ.
ಅಲಿಪ್ತ ಚಳವಳಿಯ (ಎನ್‌ಎಎಂ) 18ನೇ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಅವರು ‘ಅಂತರರಾಷ್ಟ್ರೀಯ ಶಾಂತಿ ಹಾಗೂ ಭದ್ರತೆಗೆ ಅಪಾಯ ಒಡ್ಡುವ ಏಕೈಕ ವಿನಾಶಕಾರಿ ಅಂಶ ಭಯೋತ್ಪಾದನೆ’ ಎಂದು ಹೇಳಿದ್ದಾರೆ.
ಉಗ್ರರಿಂದ ಒಳನುಸುಳುವಿಕೆ ಕಳೆದ ವರ್ಷ ಅಧಿಕ
ನವದೆಹಲಿ (ಪಿಟಿಐ): ಪಾಕಿಸ್ತಾನ ಬೆಂಬಲಿತ ಉಗ್ರರು ಜಮ್ಮು–ಕಾಶ್ಮೀರದ ಗಡಿ ಮೂಲಕ ಒಳನುಸುಳಲು 328 ಬಾರಿ ಯತ್ನಿಸಿದ್ದಾರೆ. ಈ ಪೈಕಿ 2018ರಲ್ಲಿ 143 ಬಾರಿ ಸಫಲರಾಗಿದ್ದು, ಇದು ಕಳೆದ ಐದು ವರ್ಷಗಳಲ್ಲಿಯೇ ಅಧಿಕ ಸಂಖ್ಯೆಯ ಯತ್ನವಾಗಿದೆ ಎಂದು ಗೃಹ ಸಚಿವಾಲಯದ ವಾರ್ಷಿಕ ವರದಿ ತಿಳಿಸಿದೆ.
ಸಚಿವಾಲಯ ಸಿದ್ಧಪಡಿಸಿರುವ 2018–19ನೇ ಸಾಲಿನ ವರದಿಯಲ್ಲಿ ಈ ವಿಷಯವನ್ನು ಉಲ್ಲೇಖಿಸಲಾಗಿದೆ. ಇದೇ ಅವಧಿಯಲ್ಲಿ 257 ಉಗ್ರರು ಹತರಾಗಿದ್ದು, ಭದ್ರತಾ ಪಡೆಯ 91 ಜನ ಯೋಧರು, 39 ಜನ ನಾಗರಿಕರು ಹುತಾತ್ಮರಾಗಿದ್ದಾರೆ. ಇದು ಕಳೆದ ಐದು ವರ್ಷಗಳ ಅವಧಿಯಲ್ಲಿ ಸಂಭವಿಸಿದ ಅಧಿಕ ಸಾವು–ನೋವು ಎಂದು ವರದಿಯಲ್ಲಿ ವಿವರಿಸಲಾಗಿದೆ.
1990ರಲ್ಲಿ ಕಣಿವೆ ರಾಜ್ಯದಲ್ಲಿ ಭಯೋತ್ಪಾದನಾ ಕೃತ್ಯಗಳು ಆರಂಭಗೊಂಡವು.ಅಂದಿನಿಂದ ಈ ವರೆಗೆ 5,273 ಉಗ್ರರು ಹತ್ಯೆಯಾಗಿದ್ದರೆ, 14,024 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
‘ಮುಕ್ತ ಭೇಟಿಗೆ ಅವಕಾಶ ನೀಡಿ’
ವಾಷಿಂಗ್ಟನ್ (ಪಿಟಿಐ): ವಿದೇಶಿ ಪತ್ರಕರ್ತರು ಹಾಗೂ ರಾಜಕಾರಣಿಗಳು ಕಾಶ್ಮೀರಕ್ಕೆ ಮುಕ್ತವಾಗಿ ಭೇಟಿ ನೀಡಲು ಅವಕಾಶ ಕಲ್ಪಿಸಬೇಕು ಎಂದು ಕೋರಿ ಅಮೆರಿಕದಲ್ಲಿನ ಭಾರತದ ರಾಯಭಾರಿ ಹರ್ಷವರ್ಧನ್ ಶ್ರಿಂಗ್ಲಾ ಅವರಿಗೆ ಪತ್ರ ಬರೆದಿದ್ದಾರೆ.
‘ಕಾಶ್ಮೀರದಲ್ಲಿನ ಪರಿಸ್ಥಿತಿ ಕುರಿತು ಭಾರತ ನೀಡಿರುವ ಚಿತ್ರಣಕ್ಕೂ, ರಾಜಕಾರಣಿಗಳು ನೀಡಿದ ವಿವರಣೆಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಕೆಲವು ಅಂತರರಾಷ್ಟ್ರೀಯ ಪತ್ರಕರ್ತರು ಕಾಶ್ಮೀರದ ಬೆಳವಣಿಗೆಗಳ ಕುರಿತು ವಿವರವಾಗಿ ವರದಿ ಮಾಡಿದ್ದು, ಇವರ ಪಾತ್ರ ಮಹತ್ವದ್ದಾಗಿದೆ. ಆದರೆ, ಭದ್ರತೆ ಸಲುವಾಗಿ ಹೇರಿರುವ ನಿರ್ಬಂಧಗಳಿಂದ ಪತ್ರಕರ್ತರಿಗೆ ತಮ್ಮ ಕರ್ತವ್ಯ ನಿರ್ವಹಿಸಲು ಸಮಸ್ಯೆಗಳಾಗುತ್ತಿವೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
‘ಪತ್ರಕರ್ತರಿಗೆ ಜಮ್ಮು ಮತ್ತು ಕಾಶ್ಮೀರದ ಒಳಗೆ ಪ್ರವೇಶಿಸಲು ಇನ್ನೂ ಏಕೆ ಅವಕಾಶ ನೀಡಿಲ್ಲ ಎಂದು ಕಾರಣ ತಿಳಿಸಬೇಕು. ಯಾವಾಗ ಅವಕಾಶ ನೀಡಲಾಗುತ್ತದೆ ಎಂದೂ ತಿಳಿಸಬೇಕು’ ಎಂದು ಪತ್ರದಲ್ಲಿ ಹೇಳಲಾಗಿದೆ.
ದಕ್ಷಿಣ ಏಷ್ಯಾದಲ್ಲಿನ, ನಿರ್ದಿಷ್ಟವಾಗಿ ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ಸ್ಥಿತಿ ಕುರಿತು ಅಮೆರಿಕದ ಸಂಸದರ ಸಮಿತಿಯೊಂದು ಮಾಹಿತಿ ಸಂಗ್ರಹಿಸಿದ ಬಳಿಕ, ಶ್ರಿಂಗ್ಲಾ ಅವರಿಗೆ ಈ ಪತ್ರ ಬರೆಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.