ADVERTISEMENT

ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಸದೃಢ: ಆರ್‌ಬಿಐ ಗವರ್ನರ್ ಹೇಳಿದ್ದೇನು?

ಪಿಟಿಐ
Published 14 ಏಪ್ರಿಲ್ 2023, 6:48 IST
Last Updated 14 ಏಪ್ರಿಲ್ 2023, 6:48 IST
ಆರ್‌ಬಿಐ ಗವರ್ನರ್ ಶಕ್ತಿಕಾಂತ್‌ ದಾಸ್‌ (ಪಿಟಿಐ ಚಿತ್ರ)
ಆರ್‌ಬಿಐ ಗವರ್ನರ್ ಶಕ್ತಿಕಾಂತ್‌ ದಾಸ್‌ (ಪಿಟಿಐ ಚಿತ್ರ)   

ವಾಷಿಂಗ್ಟನ್‌: ದೇಶದ ಆರ್ಥಿಕ ವ್ಯವಸ್ಥೆಯು ಯುಎಸ್‌ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದ ಸಂಪೂರ್ಣವಾಗಿ ಪ್ರತ್ಯೇಕಿಸಲ್ಪಟ್ಟಿದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ್‌ ದಾಸ್‌ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಾಸ್‌, ಯುಎಸ್‌ ಹಾಗೂ ಸ್ವಿಟ್ಜರ್‌ಲ್ಯಾಂಡ್‌ನ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಾದ ಇತ್ತೀಚಿನ ಬೆಳವಣಿಗೆಗಳು, ಆರ್ಥಿಕ ಮತ್ತು ಬ್ಯಾಂಕಿಂಗ್‌ ವ್ಯವಸ್ಥೆಯ ಸ್ಥಿರತೆಯ ಪ್ರಾಮುಖ್ಯತೆಯತ್ತ ಮತ್ತೊಮ್ಮೆ ದೃಷ್ಟಿ ಹರಿಸುವಂತೆ ಮಾಡಿವೆ ಎಂದಿದ್ದಾರೆ.

ಆರ್‌ಬಿಐ ಗವರ್ನರ್ ಅವರು, ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್‌) ಹಾಗೂ ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಯಲ್ಲಿ ಭಾಗವಹಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರೊಂದಿಗೆ ಇಲ್ಲಿಗೆ ಆಗಮಿಸಿದ್ದಾರೆ.

ADVERTISEMENT

ಯುಎಸ್‌ ಮೂಲದ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ ದಿವಾಳಿಯಾದ ಬಗ್ಗೆ ಎದುರಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ದಾಸ್‌, 'ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆ, ಭಾರತೀಯ ಹಣಕಾಸು ವ್ಯವಸ್ಥೆಯು ಯುಎಸ್ ಅಥವಾ ಸ್ವಿಟ್ಜರ್‌ಲ್ಯಾಂಡ್‌ನಲ್ಲಿನ ಬೆಳವಣಿಗೆಗಳಿಂದ ಸಂಪೂರ್ಣವಾಗಿ ಪ್ರತ್ಯೇಕಿಸಲ್ಪಟ್ಟಿದೆ. ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯು ಸ್ಥಿತಿಸ್ಥಾಪಕ, ಸ್ಥಿರ ಮತ್ತು ಆರೋಗ್ಯಕರವಾಗಿದೆ' ಎಂದು ಪ್ರತಿಪಾದಿಸಿದ್ದಾರೆ.

'ಬ್ಯಾಂಕಿಂಗ್‌ಗೆ ಸಂಬಂಧಿಸಿದ ಮಾನದಂಡಗಳು, ಅದು ಬಂಡವಾಳ ಸಮರ್ಪಕತೆ ಇರಬಹುದು ಅಥವಾ ಸ್ವತ್ತುಗಳ ಶೇಕಡಾವಾರು ಪ್ರಮಾಣವಾಗಿರಬಹುದು. ಇಲ್ಲವೇ, ವೈಯಕ್ತಿಕ ಮಟ್ಟದಲ್ಲಿ ಮತ್ತು ವ್ಯವಸ್ಥಿತ ಮಟ್ಟದಲ್ಲಿ ಬ್ಯಾಂಕ್‌ಗಳ ದ್ರವ್ಯತೆ ವ್ಯಾಪ್ತಿಯ ಅನುಪಾತವಾಗಿರಲಿ, ಬ್ಯಾಂಕುಗಳ ಲಾಭದಾಯಕತೆ ಅಥವಾ ಯಾವುದೇ ಇರಲಿ. ಭಾರತೀಯ ಬ್ಯಾಂಕಿಂಗ್‌ ವ್ಯವಸ್ಥೆಯು ತುಂಬಾ ಆರೋಗ್ಯಕರವಾಗಿ ಮುಂದುವರಿಯುತ್ತದೆ' ಎಂದಿದ್ದಾರೆ.

'ನಾವು ಬ್ಯಾಂಕೇತರ ಹಣಕಾಸು ಸಂಸ್ಥೆಗಳೂ ಸೇರಿದಂತೆ ಸಂಪೂರ್ಣ ಬ್ಯಾಂಕಿಂಗ್ ವ್ಯವಸ್ಥೆ ಮೇಲಿನ ನಿಯಂತ್ರಣ ಮತ್ತು ಮೇಲ್ವಿಚಾರಣೆಯನ್ನು ಗಮನಾರ್ಹವಾಗಿ ಸುಧಾರಿಸಿದ್ದೇವೆ ಮತ್ತು ಬಿಗಿಗೊಳಿಸಿದ್ದೇವೆ' ಎಂದು ತಿಳಿಸಿದ್ದಾರೆ.

ಬಿಕ್ಕಟ್ಟು ಸೃಷ್ಟಿಯಾಗುವ ವರೆಗೆ ಕಾಯುವ ಬದಲು, ದೋಷಗಳನ್ನು ಮೊದಲೇ ಗುರುತಿಸುವುದು ಮೇಲ್ವಿಚಾರಣೆಯ ಆದ್ಯತೆಯಾಗಿರುತ್ತದೆ ಎಂದೂ ದಾಸ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.