ಕಠ್ಮಂಡು: ಭಾರತ ಮೂಲದ ಪ್ರವಾಸಿ ಬಸ್ ಶುಕ್ರವಾರ ನೇಪಾಳದ ತನಹುನ್ ಜಿಲ್ಲೆಯ ಆಯಿನಾ ಪಹಾರದ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ, 150 ಅಡಿ ಆಳದ ಮಾರ್ಸ್‌ಯಾಂಗಡಿ ನದಿಗೆ ಉರುಳಿದ್ದು, ಒಟ್ಟು 27 ಮಂದಿ ಮೃತಪಟ್ಟಿದ್ದಾರೆ.
ಬಸ್‌ನಲ್ಲಿದ್ದ ಉಳಿದವರು ಗಾಯಗೊಂಡಿದ್ದಾರೆ. ಬಸ್‌ನಲ್ಲಿದ್ದವರು ಪೋಖರಾ ಪಟ್ಟಣದ ರೆಸಾರ್ಟ್‌ನಿಂದ ರಾಜಧಾನಿ ಕಠ್ಮಂಡುವಿಗೆ ತೆರಳುತ್ತಿದ್ದರು. ಬಸ್‌ನಲ್ಲಿ ಚಾಲಕ, ಸಹ ಚಾಲಕ ಸೇರಿ 43 ಜನರಿದ್ದರು. ಈ ಬಸ್ ಉತ್ತರ ಪ್ರದೇಶದಲ್ಲಿ ನೋಂದಣಿ ಆಗಿದೆ.
ಭಾರತೀಯ ರಾಯಭಾರ ಕಚೇರಿ ಈ ಬಗ್ಗೆ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯ ಕುರಿತಂತೆ ಸ್ಥಳೀಯ ಅಧಿಕಾರಿಗಳ ಜೊತೆಗೆ ಸಂಪರ್ಕದಲ್ಲಿ ಇರುವುದಾಗಿ ತಿಳಿಸಿದೆ.
ಪೊಲೀಸ್ ಅಧಿಕಾರಿ ಶೈಲೇಂದ್ರ ಥಾಪಾ ಅವರು, ‘ಅಪಘಾತ ಸ್ಥಳದಿಂದ 27 ಶವಗಳನ್ನು ಹೊರತೆಗೆದಿದ್ದು, ರಕ್ಷಣೆಗೆ ಸೇನೆ ಎಂ.ಐ 17 ಹೆಲಿಕಾಪ್ಟರ್ ನೆರವು ಪಡೆಯಲಾಗಿದೆ’ ಎಂದರು.
ಹಿಮಾಲಯ ಪರ್ವತ ಶ್ರೇಣಿ ವ್ಯಾಪ್ತಿಯ ನೇಪಾಳದಲ್ಲಿ ಸಾಮಾನ್ಯವಾಗಿ ನದಿಗಳಲ್ಲಿ ನೀರು ಹರಿವಿನ ವೇಗ ಹೆಚ್ಚಿರುತ್ತದೆ. ಜೂನ್–ಸೆಪ್ಟೆಂಬರ್ ಮಳೆಗಾಲವಾಗಿದ್ದು, ಈ ಅವಧಿಯಲ್ಲಿ ನೀರಿನ ಹರಿವು ಸಾಮಾನ್ಯಕ್ಕಿಂತಲೂ ಹೆಚ್ಚಿರುತ್ತದೆ.
ಅಧಿಕಾರಿಯನ್ನು ನಿಯೋಜಿಸಿದ ಉತ್ತರ ಪ್ರದೇಶ:
ಅಪಘಾತ ಸ್ಥಳದಲ್ಲಿದ್ದು, ಪರಿಹಾರ ಕಾರ್ಯಗಳಿಗೆ ನೆರವಾಗಲು ಉತ್ತರ ಪ್ರದೇಶ ಸರ್ಕಾರವು ಉಪ ವಿಭಾಗೀಯ ಅಧಿಕಾರಿ (ಎಸ್‌ಡಿಎಂ) ದರ್ಜೆಯ ಒಬ್ಬರನ್ನು ನಿಯೋಜಿಸಿದೆ.
ಉತ್ತರ ಪ್ರದೇಶದ ಪರಿಹಾರ ಆಯುಕ್ತರು ಈ ಕುರಿತು ಹೇಳಿಕೆ ನೀಡಿದ್ದು, ಎಸ್‌ಡಿಎಂ ಮಹಾರಾಜ್‌ಗಂಜ್ ಅವರನ್ನು ನೆರವು ಕಾರ್ಯಕ್ಕೆ ನಿಯೋಜಿಸಲಾಗಿದೆ. ವಿದೇಶಾಂಗ ಸಚಿವಾಲಯವು ನೇಪಾಳದ ಸ್ಥಳೀಯ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ.ವಾಲಯವು ನೇಪಾಳದ ಸ್ಥಳೀಯ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.