ADVERTISEMENT

ಬ್ರಿಟನ್‌ನ ದುಬಾರಿ ಮನೆ ಲಂಡನ್‌ ಮ್ಯಾನ್ಶನ್‌ ಖರೀದಿಸಿದ ಭಾರತ ಮೂಲದ ಉದ್ಯಮಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜುಲೈ 2023, 13:27 IST
Last Updated 22 ಜುಲೈ 2023, 13:27 IST
   

ಲಂಡನ್‌: ಒಂದು ಕಾಲದಲ್ಲಿ ಲಂಡನ್‌ನ ಅತಿ ದುಬಾರಿ ಮತ್ತು ವಿಲಾಸಿ ಮನೆ ಎಂದೇ ಹೆಸರುವಾಸಿಯಾಗಿದ್ದ ‘ಲಂಡನ್‌ ಮ್ಯಾನ್ಶನ್‌‘ ಅನ್ನು ಭಾರತೀಯ ಮೂಲದ ಉದ್ಯಮಿ ₹1200 ಕೋಟಿ ಕೊಟ್ಟು ಖರೀದಿಸಿದ್ದಾರೆ. 

ಲಂಡನ್‌ನ ಪ್ರತಿಷ್ಠಿತ ರಿಜೆಂಟ್‌ ಪಾರ್ಕ್‌ ಬಳಿಯ 150 ಪಾರ್ಕ್‌ ರಸ್ತೆಯಲ್ಲಿರುವ 7800 ಚದರಡಿಯ ಈ ಮನೆ 1827ರಲ್ಲಿ ನಿರ್ಮಾಣಗೊಂಡಿದ್ದು. ಬಕ್ಕಿಂಗ್‌ಹ್ಯಾಮ್‌ ಪ್ಯಾಲೇಸ್‌ ವಿನ್ಯಾಸ ಮಾಡಿದ ಜಾನ್‌ ನ್ಯಾಶ್‌ ಅವರೇ ಈ ಮನೆಯನ್ನೂ ವಿನ್ಯಾಸ ಮಾಡಿದ್ದರು.  ಅಂದಿನಿಂದಲೂ ಈ ಮನೆ ಸುದ್ದಿಯಲ್ಲಿದೆ.

ಕಾಲ ಸರಿದಂತೆ ಒಮ್ಮೆ ಇದು ಹ್ಯಾನೋವರ್‌ ಲಾಡ್ಜ್‌ ಆಗಿ ಬದಲಾಯಿತು. ನಂತರ ಫ್ರಾನ್ಸ್‌ನ ರಾಯಭಾರಿ ಅವರ ಮನೆಯಾಯಿತು. ನಂತರ ರಾಜ್‌ಕುಮನ್‌ ಬಾಗ್ರಿ ಎಂಬುವವರು ಇದನ್ನು ಖರೀದಿಸಿದರು. ನಂತರ ಸೌದಿ ದೊರೆ ಈ ಮ್ಯಾನ್ಶನ್ ಮಾಲೀಕರಾದರು.

ADVERTISEMENT

2012ರಲ್ಲಿ ರಷ್ಯಾದ ಉದ್ಯಮಿ ಆಂಡ್ರೇ ಗೋಂಚಾರೇಂಕೊ ಇದನ್ನು ₹1265 ಕೋಟಿಗೆ ಖರೀದಿಸಿದರು. ಆಗ ಇದು ಬ್ರಿಟನ್‌ನಲ್ಲೇ ಅತ್ಯಂತ ದುಬಾರಿ ಬೆಲೆಯ ಆಸ್ತಿ ಮಾರಾಟ ಎಂದೇ ಖ್ಯಾತಿ ಪಡೆದಿತ್ತು.

ತೈಲ ಉದ್ಯಮಿಯಾಗಿದ್ದ ಗೋಂಚಾರೇಂಕೊ ಈ ಕಟ್ಟಡದೊಂದಿಗೆ ಹ್ಯಾಂಸ್ಟೆಡ್‌ ಮತ್ತು ಬೆಲ್‌ಗ್ರೇವಿಯಾದಲ್ಲೂ ಎರಡು ವಿಲಾಸಿ ಮನೆಗಳನ್ನು ಖರೀದಿಸಿದ್ದರು. ಆದರೆ ಉಕ್ರೇನ್‌ ಜತೆಗಿನ ರಷ್ಯಾದ ಯುದ್ಧದಿಂದಾಗಿ ಇವರು ಮಾರಲು ನಿರ್ಧರಿಸಿದರು.

ಇಂಧನ, ಲೋಹ, ತಂತ್ರಜ್ಞಾನ ಹಾಗೂ ರಿಟೇಲ್ ಮಾರಾಟ ಕ್ಷೇತ್ರದಲ್ಲಿರುವ ಭಾರತದ ಮೂಲದ ಎಸ್ಸಾರ್ ಸಮೂಹದ ಸಂಸ್ಥಾಪಕರಾದ ರವಿ ರೂಯಿಯಾ ಸದ್ಯ ಈ ಲಂಡನ್‌ ಮ್ಯಾನ್ಶನ್‌ನ ಮಾಲೀಕ. ₹1200 ಕೋಟಿಗೆ ರವಿ ಈ ಮನೆಯನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ.

ವರ್ಷದ ಆರಂಭದಲ್ಲಿ ಈ ಮನೆಯನ್ನು ₹3100ಕೋಟಿಗೆ ಮಾರಾಟಕ್ಕೆ ಇಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.