ಟೊರಾಂಟೊ: ಕೆನಡಾದ ವಿವಿಧೆಡೆ ನಡೆಸಲು ಉದ್ದೇಶಿಸಿರುವ ಕೆಲವು ಕಾನ್ಸುಲರ್ ಶಿಬಿರಗಳನ್ನು ರದ್ದುಗೊಳಿಸಿರುವುದಾಗಿ ಭಾರತದ ಕಾನ್ಸುಲೇಟ್ ಜನರಲ್ ಕಚೇರಿ ಗುರುವಾರ ಹೇಳಿದೆ.
ಕಾನ್ಸುಲರ್ ಶಿಬಿರಗಳಿಗೆ ಕನಿಷ್ಠ ಭದ್ರತೆ ಒದಗಿಸಲು ಅಸಮರ್ಥರಾಗಿದ್ದೇವೆ ಎಂದು ಕೆನಡಾದ ಭದ್ರತಾ ಅಧಿಕಾರಿಗಳು ಹೇಳಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿದೆ.
ಹಿಂದೂ ಸಭಾ ಮಂದಿರ ಮತ್ತು ಭಾರತದ ದೂತವಾಸ ಕಚೇರಿಯು ಬ್ರಾಂಪ್ಟನ್‌ನಲ್ಲಿ ಜಂಟಿಯಾಗಿ ಆಯೋಜಿಸಿದ್ದ ಕಾನ್ಸುಲರ್ ಶಿಬಿರದ ತಾಣಕ್ಕೆ ಖಾಲಿಸ್ತಾನಿ ಪರ ಹೋರಾಟಗಾರರು ನುಗ್ಗಿ, ಅಲ್ಲಿದ್ದವರೊಂದಿಗೆ ಘರ್ಷಣೆ ನಡೆಸಿದ್ದ ಘಟನೆ ಈಚೆಗೆ ನಡೆದಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
‘ಶಿಬಿರಗಳಿಗೆ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಭದ್ರತಾ ಏಜೆನ್ಸಿಗಳು ತಿಳಿಸಿವೆ. ಆದ್ದರಿಂದ ನಿಗದಿತ ಶಿಬಿರಗಳನ್ನು ರದ್ದುಗೊಳಿಸಿದ್ದೇವೆ’ ಎಂದು ಭಾರತದ ಕಾನ್ಸುಲರ್ ಜನರಲ್ ‘ಎಕ್ಸ್’ನಲ್ಲಿ ಪ್ರಕಟಿಸಿದ್ದಾರೆ.
ಖಾಲಿಸ್ತಾನ ಧ್ವಜಗಳನ್ನು ಹಿಡಿದಿದ್ದ ಪ್ರತಿಭಟನಕಾರರು ಹಿಂದೂ ಸಭಾ ದೇವಾಲಯದ ಆವರಣದೊಳಗೆ ನುಗ್ಗಿ, ದಾಂದಲೆ ನಡೆಸಿದ್ದ ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿತ್ತು. ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರೂ ಈ ಘಟನೆಯನ್ನು ಖಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.