ಲಂಡನ್: ಮೂರು ಸಾವಿರ ಕಾರುಗಳನ್ನು ಹೊತ್ತು ಜರ್ಮನಿಯಿಂದ ಈಜಿಪ್ಟ್‌ಗೆ ತೆರಳುತ್ತಿದ್ದ ಸರಕು ಸಾಗಣೆ ಹಡಗಿಗೆ ನೆದರ್ಲೆಂಡ್ಸ್ ಸಮುದ್ರ ತೀರದಲ್ಲಿ ಬೆಂಕಿ ಬಿದ್ದಿದ್ದು, ಭಾರತ ಮೂಲದ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ.
ಘಟನೆಯಲ್ಲಿ 20 ಮಂದಿ ಗಾಯಗೊಂಡಿದ್ದಾರೆ. ಹಡಗಿಗೆ ಹೊತ್ತಿಕೊಂಡಿರುವ ಬೆಂಕಿ ಇನ್ನೂ ಕೆಲವು ದಿನ ಉರಿಯಲಿದೆ ಎಂದು ಡಚ್ ಕರಾವಳಿ ಕಾವಲು ಪಡೆ ಹೇಳಿದೆ.
199 ಮೀಟರ್ ಉದ್ದದ, ಪನಾಮದ ‘ಫ್ರೀಮೆಂಟಲ್ ಹೈವೇ’ ಹೆಸರಿನ ಹಡಗಿನಲ್ಲಿ ಮಂಗಳವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿತ್ತು. ಹೀಗಾಗಿ ಸಿಬ್ಬಂದಿ ಸಮುದ್ರಕ್ಕೆ ಹಾರಿ ಪಾರಾಗಲು ಪ್ರಯತ್ನಿಸಿದ್ದರು. ಈ ಪೈಕಿ 7 ಮಂದಿಯನ್ನು ಕರಾವಳಿ ಕಾವಲು ಪಡೆ ರಕ್ಷಿಸಿದೆ.
ಭಾರತ ಮೂಲದ ಸಿಬ್ಬಂದಿಯೊಬ್ಬರು ಮೃತಪಟ್ಟಿರುವುದಾಗಿ ನೆದರ್ಲೆಂಡ್ಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಪ್ರಕಟಿಸಿ ಮಾಹಿತಿ ನೀಡಿದೆ. ಮೃತದೇಹವನ್ನು ಕುಟುಂಬಸ್ಥರಿಗೆ ತಲುಪಿಸಲು ಎಲ್ಲ ಪ್ರಯತ್ನ ನಡೆಸುತ್ತಿರುವುದಾಗಿ ಹೇಳಿದೆ. ವ್ಯಕ್ತಿಯ ಸಾವಿಗೆ ಕಾರಣಗಳು ಗೊತ್ತಾಗಿಲ್ಲ ಎನ್ನಲಾಗಿದೆ.
ದೋಣಿ ಮತ್ತು ಹೆಲಿಕಾಪ್ಟರ್‌ಗಳನ್ನು ಬಳಸಿ ಉಳಿದ 23 ಸಿಬ್ಬಂದಿಯ ರಕ್ಷಣೆ ಮಾಡಲಾಗಿದೆ ಎಂದು ನೆದರ್ಲೆಂಡ್ಸ್ ಕರಾವಳಿ ಕಾವಲುಪಡೆಯ ವಕ್ತಾರರು ತಿಳಿಸಿದ್ದಾರೆ.
ಹಡಗಿನಲ್ಲಿದ್ದ 25 ಎಲೆಕ್ಟ್ರಿಕ್ ಕಾರುಗಳ ಪೈಕಿ ಒಂದರಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಹಡಗಿಗೆ ಆವರಿಸಿತು ಎಂದು ಡಚ್ ಸುದ್ದಿ ಮಾಧ್ಯಮ ‘ಎನ್‌ಒಎಸ್’ ತಿಳಿಸಿದೆ.
ವಿಶ್ವ ಪಾರಂಪರಿಕ ತಾಣ ಎಂದು ಗುರುತಿಸಲಾಗಿರುವ ವಾಡನ್ ಸಮುದ್ರದ ಆ್ಯಮ್ಲೆಂಡ್ ದ್ವೀಪದಿಂದ 27 ಕಿ. ಮೀ ದೂರದಲ್ಲಿ ನಿಂತಿರುವ ಹಡಗು ಸದ್ಯ ಮುಳುಗುವ ಆತಂಕವಿದೆ. ಹಡಗು ಮುಳಗದಂತೆ ಮಾಡಲು ಸ್ಥಳೀಯ ಆಡಳಿತಗಳು ಶತ ಪ್ರಯತ್ನ ನಡೆಸುತ್ತಿವೆ. ಈ ಪ್ರದೇಶವು ವಿಶ್ವದ ವಲಸಿಗ ಹಕ್ಕಿಗಳಿಗೆ ಪ್ರಶಸ್ತವಾಗಿದ್ದು, ಹಡಗು ಮುಳುಗಿದರೆ ಎದುರಾಗುವ ಮಾಲಿನ್ಯ ಅವುಗಳಿಗೆ ಅಪಾಯ ತಂದೊಡ್ಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.