ADVERTISEMENT

ಅಮೆರಿಕಕ್ಕೆ ಮೋದಿ ಭೇಟಿ: ಭಾರತದಲ್ಲಿ ಬಂಡವಾಳ ಹೂಡಿಕೆಗೆ ಆಹ್ವಾನ

ಅಮೆರಿಕದ ಪ್ರಮುಖ ಕಂಪನಿಗಳ ಸಿಇಒ ಜತೆಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ

ಪಿಟಿಐ
Published 23 ಸೆಪ್ಟೆಂಬರ್ 2021, 22:23 IST
Last Updated 23 ಸೆಪ್ಟೆಂಬರ್ 2021, 22:23 IST
ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದ ಚಿತ್ರ   

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ತಮ್ಮ ಏಳನೇ ಭೇಟಿಯನ್ನು ಅಲ್ಲಿನ ವಿವಿಧ ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಜೆತೆಗಿನ ಸಂವಾದದೊಂದಿಗೆ ಆರಂಭಿಸಿದ್ದಾರೆ. ಭಾರತದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶವನ್ನು ಅವರಿಗೆ ವಿವರಿಸಿದ್ದಾರೆ.

ಈ ಬಾರಿ ಅಮೆರಿಕದ ನೇತೃತ್ವದಲ್ಲಿ ನಡೆಯಲಿರುವ ಕ್ವಾಡ್‌ ಒಕ್ಕೂಟದ ಶೃಂಗಸಭೆಯಲ್ಲಿ ಭಾಗಿಯಾಗಲು ಮೋದಿ ಅವರು ಇಲ್ಲಿಗೆ ಬಂದಿದ್ದಾರೆ. ಈ ಭೇಟಿಯಲ್ಲಿಯೇ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜತೆ ಅವರು ಮಾತುಕತೆ ನಡೆಸಲಿದ್ದಾರೆ.

ಗುರುವಾರ ಬೆಳಿಗ್ಗೆ ಅವರು, ಅಮೆರಿಕದ ಐದು ಪ್ರಮುಖ ಉದ್ಯಮಗಳ ಸಿಇಒಗಳ ಜತೆ ಮುಖತಃ ಚರ್ಚೆ ನಡೆಸಿದ್ದಾರೆ.ಅಡೋಬಿಯ ಶಂತನು ನಾರಾಯಣ್‌, ಜನರಲ್ ಆಟೊಮಿಕ್ಸ್‌ನ ವಿವೇಕ್ ಲಾಲ್, ಕ್ವಾಲ್‌ಕಾಂನ ಕ್ರಿಸ್ಟಿಯಾನೊ ಇ ಅಮೋನ್, ಫರ್ಸ್‌ ಸೋಲಾರ್‌ನ ಮಾರ್ಕ್ ವಿಡ್ಮಾರ್‌ ಮತ್ತು ಬ್ಲ್ಯಾಕ್‌ಸ್ಟೋನ್‌ನ ಸ್ಟೀಫನ್ ಎ ಶಾವಾರ್‌ಝ್ಮಾನ್‌ ಜತೆಗೆ ಮಾತುಕತೆ ನಡೆಸಿದ್ದಾರೆ.

ADVERTISEMENT

ಭಾರತದಲ್ಲಿ ತಂತ್ರಾಂಶ ಕ್ಷೇತ್ರದಲ್ಲಿನ ಅವಕಾಶಗಳ ಬಗ್ಗೆ ಶಂತನು ಜತೆಗೆ ಮಾತುಕತೆ ನಡೆಸಿದ್ದಾರೆ. ಸೇನಾ ಡ್ರೋನ್‌ಗಳ ತಯಾರಿಕೆ ಬಗ್ಗೆ ವಿವೇಕ್ ಅವರ ಜತೆ ಮಾತುಕತೆ ನಡೆಸಿದ್ದಾರೆ. ಭಾರತವು ಅಮೆರಿಕದಿಂದ ಸೇನಾ ಡ್ರೋನ್‌ಗಳನ್ನು ಖರೀದಿಸುವ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದೆ.

ಭಾರತದಲ್ಲಿ 5ಜಿ ಮೊಬೈಲ್ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಬಂಡವಾಳ ಹೂಡಿಕೆಗೆ ಇರುವ ಅವಕಾಶದ ಬಗ್ಗೆ ಕ್ರಿಸ್ಟಿಯಾನೊ ಜತೆಗೆ ಮಾತುಕತೆ ನಡೆಸಿದ್ದಾರೆ. ಭಾರತದಲ್ಲಿ ಸೌರಶಕ್ತಿ ಕ್ಷೇತ್ರದಲ್ಲಿ ಇರುವ ಅವಕಾಶಗಳ ಬಗ್ಗೆ ಮಾರ್ಕ್ ವಿಡ್ಮಾರ್ ಜತೆಗೆ ಚರ್ಚಿಸಿದ್ದಾರೆ.

ಭಾರತದಲ್ಲಿ ರಿಯಲ್‌ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಷೇರುವಿಕ್ರಯ ಮತ್ತು ರಿಯಲ್ ಎಸ್ಟೇಟ್‌ ಕಂಪನಿ ಬ್ಲ್ಯಾಕ್‌ಸ್ಟೋನ್‌ನ ಸಿಇಒ ಜತೆಗೆ ಮೋದಿ ಮಾತುಕತೆ ನಡೆಸಿದ್ದಾರೆ.

ಈ ಐದೂ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಇರುವ ಅವಕಾಶಗಳನ್ನು ಮೋದಿ ಅವರು ವಿವರಿಸಿದ್ದಾರೆ. ಮತ್ತು ಬಂಡವಾಳ ಹೂಡಲು ಆಹ್ವಾನ ನೀಡಿದ್ದಾರೆ.

ಮೋದಿ– ಕಮಲಾ ಭೇಟಿ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಕಮಲಾ ಅವರು, ‘ಭಾರತವು ಅಮೆರಿಕದ ಪ್ರಮುಖ ಪಾಲುದಾರ ದೇಶ’ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಮೋದಿ ಅವರು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

‘ಜಗತ್ತಿನಾದ್ಯಂತ ಭಾರತೀಯರ ಛಾಪು’
ವಾಷಿಂಗ್ಟನ್
: ‘ಭಾರತೀಯರು ಜಗತ್ತಿನಾದ್ಯಂತ ಛಾಪು ಮೂಡಿಸಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಅಮೆರಿಕ ಭೇಟಿಗಾಗಿ ಇಲ್ಲಿಗೆ ಬಂದಿಳಿದ ಮೋದಿ ಅವರನ್ನು, ಭಾರತೀಯ ಅಮೆರಿಕನ್ ಸಮುದಾಯದವರು ಸ್ವಾಗತಿಸಿದರು. ಅವರ ಜತೆ ನಡೆದ ಕಿರು ಸಂವಾದದಲ್ಲಿ ಮೋದಿ ಅವರು ಈ ಮಾತು ಹೇಳಿದ್ದಾರೆ. ‘ನನ್ನನ್ನು ಭವ್ಯವಾಗಿ ಸ್ವಾಗತಿಸಿದ ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ಅಮೆರಿಕನ್ ಸಮುದಾಯಕ್ಕೆ ಅಭಿನಂದನೆಗಳು. ಬೇರೆ ದೇಶಗಳಲ್ಲಿ ನೆಲೆಸಿರುವ ಭಾರತೀಯರೇ ನಮ್ಮ ಬಲ’ ಎಂದು ಮೋದಿ ಹೇಳಿದ್ದಾರೆ.

ಚರ್ಚೆಗೆ ಕಾರಣವಾದ ಕಡತ ಪರಿಶೀಲನೆ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವಾಗ ಕಡತಗಳನ್ನು ಪರಿಶೀಲಿಸುತ್ತಿರುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಈ ಚಿತ್ರವು ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

ಚಿತ್ರದ ಜತೆಗೆ ಮೋದಿ ಅವರು, ‘ದೀರ್ಘವಾದ ವಿಮಾನ ಪ್ರಯಾಣವೆಂದರೆ ಅದು, ಕಡತಗಳು ಮತ್ತು ಕಾಗದಗಳನ್ನು ಪರಿಶೀಲಿಸಲು ಒಂದು ಅವಕಾಶ’ ಎಂದು ಬರೆದಿದ್ದರು. ಈ ಟ್ವೀಟ್‌ ಈಗ ವೈರಲ್ ಆಗಿದೆ. ಮೋದಿ ಅವರು ತಾವೊಬ್ಬರೇ ಸದಾ ಕೆಲಸ ಮಾಡುತ್ತೇವೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಹಿಂದಿನ ಪ್ರಧಾನಿಗಳೂ ಈ ರೀತಿ ವಿಮಾನಯಾನದ ವೇಳೆ ಕೆಲಸ ಮಾಡಿದ್ದಾರೆ ಎಂದು ಹಲವರು ಟ್ವೀಟ್ ಮಾಡಿದ್ದಾರೆ.

ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ವಿಮಾನಯಾನದ ವೇಳೆ ಕಡತ ಪರಿಶೀಲಿಸುತ್ತಿರುವ ಚಿತ್ರವನ್ನು ಅವರ ಮೊಮ್ಮಗ ವಿಭಾಕರ್ ಶಾಸ್ತ್ರಿ ಟ್ವೀಟ್ ಮಾಡಿದ್ದಾರೆ. ‘ಹಳೆಯ ಚಿತ್ರ: ನನ್ನ ತಾತ ಮತ್ತು ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್ ಶಾಸ್ತ್ರಿ ಅವರು ವಿಮಾನದಲ್ಲಿ ಕಡತ ಪರಿಶೀಲಿಸಿದ ಚಿತ್ರ’ ಎಂದು ಅವರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ವಿಮಾನಯಾನದ ವೇಳೆ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವ ಚಿತ್ರವನ್ನು@NotAfangirll_ ಎಂಬ ಹ್ಯಾಂಡಲ್‌ನಿಂದ ಒಬ್ಬರು ಟ್ವೀಟ್ ಮಾಡಿದ್ದಾರೆ. ‘ಈಗಿನ ಆಡಳಿತದಲ್ಲಿ ನಾವು ಎಷ್ಟು ಹಿಂದೆ ಸರಿಯುತ್ತಿದ್ದೇವೆ ಅಲ್ಲವೇ? 80ರ ದಶಕದಲ್ಲಿ ಪ್ರಧಾನಿ ರಾಜೀವ್ ಗಾಂಧಿ ಅವರು ವಿಮಾನಯಾನದ ವೇಳೆ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಮೋದಿಜೀ ಅವರು ಕಾಗದ ಬಳಸುತ್ತಿದ್ದಾರೆ?’ ಎಂದು ಅವರು ಬರೆದುಕೊಂಡಿದ್ದಾರೆ.

ಮತ್ತೊಬ್ಬರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವಿಮಾನಯಾನದ ವೇಳೆ ಕಡತಗಳನ್ನು ಪರಿಶೀಲಿಸುತ್ತಿರುವ ಚಿತ್ರವನ್ನು ಟ್ವೀಟ್‌ ಮಾಡಿದ್ದಾರೆ. ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ವಿಮಾನಯಾನದ ವೇಳೆ ಕಡತ ಪರಿಶೀಲಿಸುತ್ತಿರುವ ಚಿತ್ರವನ್ನು ಪುನೀತ್ ಅಗರ್ವಾಲ್ ಎಂಬುವವರು ಟ್ವೀಟ್ ಮಾಡಿದ್ದಾರೆ. ಈ ಎಲ್ಲಾ ಚಿತ್ರಗಳೂ ವೈರಲ್ ಆಗಿವೆ.

*

ಭಾರತದಲ್ಲಿ ಚಿಪ್‌ ತಂತ್ರಜ್ಞಾನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಅವಕಾಶಗಳಿವೆ. ಪ್ರಧಾನಿ ನರೇಂದ್ರ ಮೋದಿ ಜತೆಗೆ ನಡೆಸಿದ ಮಾತುಕತೆ ಫಲಪ್ರದವಾಗಿತ್ತು.
-ಕ್ರಿಸ್ಟಿಯಾನೊ ಇ ಅಮೋನ್, ಕ್ವಾಲ್‌ಕಾಂ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.