ADVERTISEMENT

ಭಾರತದ ಆರ್ಥಿಕತೆ ಪುಟಿದೇಳುತ್ತಿದೆ: ಕೇಂದ್ರ ಸಚಿವ ವಿ.ಮುರುಳೀಧರನ್‌

ಪಿಟಿಐ
Published 17 ಅಕ್ಟೋಬರ್ 2021, 6:56 IST
Last Updated 17 ಅಕ್ಟೋಬರ್ 2021, 6:56 IST
ವಿ.ಮರಳೀಧರನ್
ವಿ.ಮರಳೀಧರನ್   

ನ್ಯೂಯಾರ್ಕ್‌: ಭಾರತದ ಆರ್ಥಿಕತೆಯು ಬಲವಾಗಿ ಪುಟಿದೇಳುತ್ತಿದೆ. ದೇಶೀಯ ಬಳಕೆಯ ಪ್ರಮಾಣವು ಹೆಚ್ಚುತ್ತಿದೆ. ಕೈಗಾರಿಕಾ ಉತ್ಪಾದನೆಯೂ ಕೋವಿಡ್‌ ಪೂರ್ವದ ಹಂತದಲ್ಲಿ ಇದ್ದ ಸ್ಥಿತಿಗೇ ಮರಳುತ್ತಿದೆ ಆಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರುಳೀಧರನ್‌ ಹೇಳಿದ್ದಾರೆ.

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಸುಧಾರಣೆ ಕ್ರಮಗಳು ದೇಶದಲ್ಲಿನ ವ್ಯಾಪಾರ ವ್ಯವಸ್ಥೆಗೆ ಪೂರಕವಾಗಿದೆ ಎಂದೂ ಹೇಳಿದರು. ಇಲ್ಲಿ ಜೈಪುರ ಫೂಟ್‌ ಅಮೆರಿಕ ಮತ್ತು ಗ್ರೇಷಿಯಸ್‌ ಗಿವರ್ಸ್‌ ಫೌಂಡೇಷನ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಳೆದ ವಾರದ ಆರಂಭದಲ್ಲಿ ಕೀನ್ಯಾದ ಅಧ್ಯಕ್ಷತೆಯಲ್ಲಿ ನಡೆದಿದ್ದ ಶಾಂತಿ ಸ್ಥಾಪನೆ ಮತ್ತು ಶಾಂತಿ ವ್ಯವಸ್ಥೆಯ ರಕ್ಷಣೆ ಕುರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಉನ್ನತ ಮಟ್ಟದ ಚರ್ಚೆಯಲ್ಲಿ ಭಾಗವಹಿಸಲು ಎರಡು ದಿನದ ಭೇಟಿಗಾಗಿ ಸಚಿವ ಮುರುಳೀಧರನ್‌ ನಗರಕ್ಕೆ ಬಂದಿದ್ದರು.

ADVERTISEMENT

ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಸುಧಾರಣೆ ಕ್ರಮಗಳು ವ್ಯಾಪಾರ ವ್ಯವಸ್ಥೆಗೆ ಪೂರಕವಾಗಿದೆ. ಹೂಡಿಕೆಗಳು, ತಂತ್ರಜ್ಞಾನ ಮತ್ತು ಕೌಶಲಗಳನ್ನು ದೇಶಕ್ಕೆ ತರುವ ಮೂಲಕ ವಲಸಿಗರು ಈ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸಬಹುದು ಎಂದೂ ಅಭಿಪ್ರಾಯಪಟ್ಟರು.

ಡಿಜಿಟಲ್‌ ವಹಿವಾಟುಗಳ ಮೂಲಕ ಬ್ಯಾಂಕಿಂಗ್‌ ಸುಧಾರಣೆ, ಭ್ರಷ್ಟಾಚಾರ ತಡೆ, ಹಣದುಬ್ಬರ ತಡೆ ಈ ಸುಧಾರಣಾ ಕ್ರಮಗಳಲ್ಲಿ ಸೇರಿವೆ. ಶೇ 90ರಷ್ಟು ವಿದೇಶಿ ನೇರ ಹೂಡಿಕೆ ಪ್ರಕ್ರಿಯೆಯು ಸ್ವಯಂಚಾಲಿಯ ಅನುಮೋದನೆ ಮೂಲಕ ಆಗಿದೆ. ಪ್ರತಿಕ್ಷೇತ್ರಕ್ಕೂ ಅನ್ವಯವಾಗುವಂತೆ ಸೃಜನಶೀಲತೆ,ಅನ್ವೇಷಣೆಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ‘ಸುಧಾರಣೆ, ನಿರ್ವಹಣೆ ಮತ್ತು ಬದಲಾವಣೆ’ ಎಂಬ ಧ್ಯೇಯವಾಕ್ಯದೊಂದಿಗೆ ದೂರಗಾಮಿ ರಚನಾತ್ಮಕ ಸುಧಾರಣೆಗಳನ್ನು ಕೈಗೊಂಡಿದೆ ಎಂದು ಅವರು ಪ್ರತಿಪಾದಿಸಿದರು.

‘ಆತ್ಮನಿರ್ಭರ ಭಾರತ ಎಂದರೆ ಒಳಮುಖವಾಗಿ ಕಾಣುವ ನೀತಿಯೆಂಬ ಅರ್ಥವಲ್ಲ. ಇದು ಜಾಗತಿಕ ಪೂರೈಕೆ ಸರಪಳಿಗಳನ್ನು ಜೋಡಿಸುವ ಮೂಲಕ ನಮ್ಮನ್ನು ಒಂದು ಬಲವಾದ ಸ್ವಾವಲಂಬಿ ಭಾರತದ ಕಡೆಗೆ ಸಕ್ರಿಯಗೊಳಿಸುವ ಮತ್ತು ಮುನ್ನಡೆಸುವ ತಂತ್ರವಾಗಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.