ಟೆಲ್ ಅವೀವ್: ಇಸ್ರೇಲ್ ಮೇಲೆ ಇರಾನ್ ನಡೆಸುತ್ತಿರುವ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ದೇಶದ ನಾಗರಿಕರಿಗೆ ಮತ್ತೊಂದು 'ಪ್ರಮುಖ ಮಾರ್ಗಸೂಚಿ' ಬಿಡುಗಡೆ ಮಾಡಿದೆ.
ಸಿರಿಯಾ ರಾಜಧಾನಿ ಡಮಾಸ್ಕಸ್‌ನಲ್ಲಿರುವ ಇರಾನ್ ರಾಯಭಾರ ಕಚೇರಿ ಮೇಲೆ ಇಸ್ರೇಲ್ ಏಪ್ರಿಲ್ 1ರಂದು ವೈಮಾನಿಕ ದಾಳಿ ನಡೆಸಿತ್ತು. ಆ ವೇಳೆ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ನ ಇಬ್ಬರು ಬ್ರಿಗೇಡಿಯರ್ ಜನರಲ್‌ಗಳು ಸೇರಿದಂತೆ ಹಲವರು ಹತರಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಇರಾನ್ ಶನಿವಾರ ಇಸ್ರೇಲ್ ಮೇಲೆ ದಾಳಿ ನಡೆಸಿದೆ.
ಈ ಹಿನ್ನೆಲೆಯಲ್ಲಿ, ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಾಮಾಜಿಕ ಮಾಧ್ಯಮಗಳಲ್ಲಿ 'ಪ್ರಮುಖ ಮಾರ್ಗಸೂಚಿ'ಯನ್ನು ಪ್ರಕಟಿಸಿದೆ. 'ಈ ಪ್ರದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇಸ್ರೇಲ್‌ನಲ್ಲಿರುವ ಭಾರತದ ನಾಗರಿಕರು ಆತಂಕಕ್ಕೊಳಗಾಗದೆ, ಸ್ಥಳೀಯ ಆಡಳಿತಗಳು ಪ್ರಕಟಿಸಿರುವ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಿ' ಎಂದು ಸೂಚಿಸಿದೆ.
'ಭಾರತೀಯ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕನ ನಡೆಸುತ್ತಿದೆ. ದೇಶದ ನಾಗರಿಕರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವುದಕ್ಕಾಗಿ ಇಸ್ರೇಲ್ ಆಡಳಿತ ಹಾಗೂ ಭಾರತೀಯ ಸಮುದಾಯದವರೊಂದಿಗೆ ಸಂಪರ್ಕದಲ್ಲಿದೆ' ಎಂದೂ ತಿಳಿಸಿದೆ.
ಇಸ್ರೇಲ್‌ನಲ್ಲಿರುವ ನಾಗರಿಕರು ಸುರಕ್ಷತೆಯ ದೃಷ್ಟಿಯಿಂದ ರಾಯಭಾರ ಕಚೇರಿಯೊಂದಿಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಕರೆ ನೀಡಿದ್ದು, ಅದಕ್ಕೆ ಸಂಬಂಧಿಸಿದ ಲಿಂಕ್ ಅನ್ನೂ ಹಂಚಿಕೊಂಡಿದೆ.
ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ವರದಿಗಳು ಪ್ರಕಟವಾಗುತ್ತಿದ್ದಂತೆ ಶುಕ್ರವಾರವೂ ಮಾರ್ಗಸೂಚಿ ಬಿಡುಗಡೆ ಮಾಡಿದ್ದ ರಾಯಭಾರ ಕಚೇರಿ, ಅನವಶ್ಯಕವಾಗಿ ಪ್ರಯಾಣ ಬೆಳೆಸದಿರಿ ಎಂದು ಭಾರತೀಯರಿಗೆ ಸಲಹೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.