ಟೋಕಿಯೊ: ಜಪಾನ್‌ನ ಪಶ್ಚಿಮ ಕರಾವಳಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ ನಂತರ ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಸಹಾಯವನ್ನು ಬಯಸುವ ಭಾರತೀಯರಿಗೆ ಜಪಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೋಮವಾರ ತುರ್ತು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.
ಜಪಾನ್‌ನಲ್ಲಿ ಸೋಮವಾರ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದ ಹಿನ್ನೆಲೆಯಲ್ಲಿ ಸಮುದ್ರದಲ್ಲಿ 1.2 ಮೀಟರ್ ಎತ್ತರದ ಅಲೆ ಎದ್ದಿದೆ ಎಂದು ಹೇಳಲಾಗಿದೆ. ಈ ಕಾರಣದಿಂದಾಗಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಜತೆಗೆ ಇಶಿಕಾವಾ, ನಿಗಾಟಾ, ಟೊಯಾಮಾ ಮತ್ತು ಯಮಗಾಟಾ ಪ್ರಾಂತ್ಯಗಳ ಜನರು ತಕ್ಷಣ ಎತ್ತರದ ಪ್ರದೇಶಕ್ಕೆ ಸ್ಥಳಾಂತಗೊಳ್ಳುವಂತೆ ಸೂಚಿಸಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಭೂಕಂಪ ಪೀಡಿತ ದೇಶದ ಮುಖ್ಯ ದ್ವೀಪದ ಪಶ್ಚಿಮ ಕರಾವಳಿಯಲ್ಲಿ ಜನರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದೆನ್ನಲಾಗಿದೆ.
ಭೂಕಂಪ ಮತ್ತು ಸುನಾಮಿಯಿಂದ ಸಂಕಷ್ಟಕ್ಕೆ ಸಿಲುಕಿದವರು ಸಂಪರ್ಕಿಸಲು ರಾಯಭಾರ ಕಚೇರಿಯು ತುರ್ತು ನಿಯಂತ್ರಣ ಕೊಠಡಿಯನ್ನು ತೆರೆದಿದೆ. ಯಾವುದೇ ಸಹಾಯಕ್ಕಾಗಿ ಕೆಳಗಿನ ತುರ್ತು ಸಂಖ್ಯೆಗಳು ಮತ್ತು ಇಮೇಲ್ ಐಡಿಗಳನ್ನು ಸಂಪರ್ಕಿಸಬಹುದು ಎಂದು ಟೋಕಿಯೊದಲ್ಲಿನ ಭಾರತೀಯ ರಾಯಭಾರ ಕಚೇರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಭಾರತೀಯ ರಾಯಭಾರ ಕಚೇರಿ ನೀಡಿರುವ ಸಂಖ್ಯೆಗಳು +81-80-3930-1715 (ಯಾಕುಬ್ ಟೋಪ್ನೋ), 81-70-1492-0049 (ಅಜಯ್ ಸೇಥಿ), +81-80-3214-4734 (ಡಿ.ಎನ್ ಬರ್ನ್ವಾಲ್), +81-80- 6229-5382 (ಎಸ್. ಭಟ್ಟಾಚಾರ್ಯ), +81-80-3214-4722 ( ವಿವೇಕ್ ರಾಠೋರ್).
ಜತೆಗೆ ರಾಯಭಾರ ಕಚೇರಿಯು sscons.tokyo@mea.gov.in ಮತ್ತು offseco.tokyo@mea.gov.in. ಎಂಬ ಎರಡು ಇಮೇಲ್ ಐಡಿಗಳನ್ನು ಸಹ ನೀಡಿದೆ.
ರಾಯಭಾರ ಕಚೇರಿಯು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ದಯವಿಟ್ಟು ಸ್ಥಳೀಯ ಸರ್ಕಾರದ ಸೂಚನೆಗಳನ್ನು ಅನುಸರಿಸಿ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.