ಲಂಡನ್/ರೋಮ್: ಇಟಲಿಯ ರೋಮ್‌ನಲ್ಲಿ ಭಾರತ ಮೂಲದ ಕೃಷಿ ಕಾರ್ಮಿಕರೊಬ್ಬರು ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ.
ಸತ್ನಾಂ ಸಿಂಗ್ ಎಂಬುವವರೇ ಮೃತ ಕಾರ್ಮಿಕ. ಅವರು ಸೋಮವಾರ ರೋಮ್ ಸಮೀಪದ ಲಾಜಿಯೋದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ, ಆಕಸ್ಮಿಕವಾಗಿ ಭಾರಿ ಕೃಷಿ ಯಂತ್ರೋಪಕರಣಕ್ಕೆ ಕೈ ಸಿಲುಕಿ ತುಂಡಾಗಿತ್ತು. ಆದರೆ, ಗಾಯಗೊಂಡ ಅವರಿಗೆ ಮಾಲೀಕ ಚಿಕಿತ್ಸೆ ಕೊಡಿಸಲಿಲ್ಲ. ಕಾರ್ಮಿಕ ಮತ್ತು ಆತನ ಪತ್ನಿಯನ್ನು ರಸ್ತೆ ಬದಿಯೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಕೆಲಸದ ವೇಳೆ ಗಂಭೀರವಾಗಿ ಗಾಯಗೊಂಡ ಕಾರ್ಮಿಕನನ್ನು ಆಸ್ಪತ್ರೆಗೆ ಕರೆದೊಯ್ಯದೆ, ಅಮಾನುಷವಾಗಿ ರಸ್ತೆ ಬದಿ ಬಿಸಾಡಲಾಗಿತ್ತು. ತುಂಡರಿಸಿದ್ದ ಆತನ ಕೈ ಅನ್ನು ಹಣ್ಣಿನ ಬಾಕ್ಸ್‌ನೊಳಗೆ ಇಡಲಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ತೀವ್ರ ರಕ್ತಸ್ರಾವ ತಾಳಲಾರದೆ ಸಿಂಗ್ ಬುಧವಾರ ಮೃತಪಟ್ಟಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ‘ಸತ್ನಾಂ ಸಿಂಗ್ ಸಾವು ಅತ್ಯಂತ ಅಮಾನವೀಯ ಘಟನೆ. ಇಂತಹ ಅನಾಗರಿಕ ವರ್ತನೆಗೆ ಕಠಿಣ ಶಿಕ್ಷೆ ಆಗಲೇಬೇಕು’ ಎಂದು ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.