ADVERTISEMENT

ಅಮೆರಿಕದಲ್ಲಿ ಅಪಘಾತ: 20 ಅಡಿ ಎತ್ತರದ ಮರವೇರಿದ SUV; 3 ಭಾರತೀಯ ಮಹಿಳೆಯರ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಏಪ್ರಿಲ್ 2024, 11:44 IST
Last Updated 27 ಏಪ್ರಿಲ್ 2024, 11:44 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕ್ಯಾಲಿಫೋರ್ನಿಯಾ: ಗುಜರಾತ್ ಮೂಲದ ಮಹಿಳೆಯರು ಸಂಚರಿಸುತ್ತಿದ್ದ ಎಸ್‌ಯುವಿ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಮೂವರು ಮಹಿಳೆಯರು ಮೃಪಟ್ಟಿದ್ದಾರೆ. 20 ಅಡಿ ಎತ್ತರದ ಮರವೇರಿರುವ ಕಾರು ಅಪಘಾತದ ಭೀಕರತೆಗೆ ಸಾಕ್ಷಿಯಂತಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

ರಾಖೀಬೆನ್ ಪಟೇಲ್, ಸಂಗೀತಾಬೆನ್ ಪಟೇಲ್ ಹಾಗೂ ಮನಿಶಾಬೆನ್ ಪಟೇಲ್‌ ಮೃತ ದುರ್ದೈವಿಗಳು. ಗುಜರಾತ್‌ನ ಆನಂದ್ ಜಿಲ್ಲೆಯವರಾದ ಇವರು, ಸೌತ್‌ ಕ್ಯಾರೊಲಿನಾದ ಗ್ರೀನ್‌ವಿಲ್ಲೆ ಕೌಂಟಿ ಬಳಿಯ ಸೇತುವೆ ಹತ್ತಿರ ಕಾರಿನಲ್ಲಿ ಸಂಚರಿಸುವಾಗ ಈ ಅಪಘಾತ ಸಂಭವಿಸಿದೆ.

ADVERTISEMENT

‘ಅತ್ಯಂತ ವೇಗವಾಗಿ ಸಂಚರಿಸಿದ ಕಾರು ರಸ್ತೆ ಲೇನ್‌ಗಳನ್ನು ದಾಟಿ ಮರಕ್ಕೆ ಡಿಕ್ಕಿ ಹೊಡೆದಿದೆ. ವೇಗ ನಿಯಂತ್ರಿಸಲಾಗದೆ ಸೇತುವೆಯ ಮತ್ತೊಂದು ಬದಿಯಲ್ಲಿದ್ದ 20 ಅಡಿ ಎತ್ತರದ ಮರವನ್ನು ಕಾರು ಏರಿದೆ. ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ವೇಗದಲ್ಲಿ ಕಾರು ಸಂಚರಿಸುತ್ತಿತ್ತು’ ಎಂದು ಸಂಚಾರ ವಿಭಾಗದ ಅಧಿಕಾರಿ ಮೈಕ್ ಎಲ್ಲಿಸ್ ಅವರು ಸ್ಥಳೀಯ ಚಾನಲ್‌ಗೆ ಮಾಹಿತಿ ನೀಡಿದ್ದಾರೆ.

‘ಕಾರಿನ ವೇಗ ಹೆಚ್ಚಾಗಿದ್ದರಿಂದ ಅದು ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಸುಮಾರು 4ರಿಂದ 6 ಲೇನ್‌ಗಳನ್ನು ಇದು ಹಾರಿಹೋಗಿ, ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತ ಸಂಭವಿಸುವ ಮೊದಲು ಚಕ್ರಗಳೂ ನೆಲದ ಮೇಲಿಲ್ಲದಂತ ವೇಗದಲ್ಲಿ ಸಂಚರಿಸಿ, ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಅದು 20 ಅಡಿ ಎತ್ತರದ ಮರದ ಮೇಲೆ ನಿಂತಿದೆ’ ಎಂದಿದ್ದಾರೆ.

‘ಸೌತ್ ಕ್ಯಾರೊಲಿನಾ ಹೆದ್ದಾರಿ ಪ್ಯಾಟ್ರೋಲ್ ವಾಹನ ತಕ್ಷಣ ರಕ್ಷಣೆಗೆ ಧಾವಿಸಿದೆ. ವಿವಿಧ ರಕ್ಷಣಾ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ನಡೆಸಿವೆ. ಕಾರಿನಲ್ಲಿದ್ದು ಬದುಕುಳಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಅಪಘಾತ ಎಚ್ಚರಿಕೆ ಸಂದೇಶವು, ಮನೆಯಲ್ಲಿದ್ದ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದೆ. ಅವರು ನಂತರ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.