ಕೊಲಂಬೊ: ಶ್ರೀಲಂಕಾದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆ ಅಲ್ಲಿನ ನಿರ್ಗಮಿತ ಪ್ರಧಾನಿ ಮಹಿಂದಾ ರಾಜಪಕ್ಸ ಹಾಗೂ ಅವರ ಸಹವರ್ತಿಗಳು ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂಬ ಊಹಾಪೋಹಗಳನ್ನುಶ್ರೀಲಂಕಾದಲ್ಲಿನ ಭಾರತದ ಹೈಕಮಿಷನರ್ ತಳ್ಳಿ ಹಾಕಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಹೈ ಕಮಿಷನರ್, ‘ಕೆಲವು ಟಿ.ವಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಶ್ರೀಲಂಕಾ ನಿರ್ಗಮಿತಪ್ರಧಾನಿ, ಅವರ ಕುಟುಂಬದವರು ಹಾಗೂ ಕೆಲ ಸ್ನೇಹಿತರು ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂಬ ವದಂತಿ ಹಬ್ಬಿಸಲಾಗುತ್ತಿದೆ. ಇದು ಸಂಪೂರ್ಣ ಸುಳ್ಳು ಅವರಿಗೆ ಭಾರತದಲ್ಲಿ ಯಾವುದೇ ರೀತಿಯ ಆಶ್ರಯ ನೀಡಿಲ್ಲ’ ಎಂದು ತಿಳಿಸಿದ್ದಾರೆ.
ನಿನ್ನೆಯಷ್ಟೇ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಉದ್ರಿಕ್ತರು ಮಹಿಂದಾ ರಾಜಪಕ್ಸ ಅವರ ಮನೆ ದ್ವಂಸ ಮಾಡಿದ್ದಲ್ಲದೇ ಅಪಾರ ಆಸ್ತಿ–ಪಾಸ್ತಿ ಹಾನಿ ಮಾಡಿದ್ದರು. ಸೋಮವಾರ ರಾಜಪಕ್ಸ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಈ ಘಟನೆಗಳು ನಡೆದಿದ್ದವು.
‘ದ್ವೀಪ ರಾಷ್ಟ್ರದಲ್ಲಿ ಉಂಟಾಗಿರುವ ಪರಿಸ್ಥಿತಿ ತಿಳಿಗೊಳಿಸಲು ಭಾರತ ಸಂಪೂರ್ಣ ಸಹಾಯ ಮಾಡಲಿದೆ. ಪ್ರಜಾಪ್ರಭುತ್ವದ ಉಳಿಯುವಿಕೆಗಾಗಿ ಹಾಗೂ ಆರ್ಥಿಕ ಪುನಶ್ಚೇತನಗೊಳ್ಳುವುದಕ್ಕಾಗಿ ಭಾರತ ಶ್ರೀಲಂಕಾದ ಜೊತೆ ಇರಲಿದೆ’ ಎಂದು ಹೈ ಕಮಿಷನರ್ ಹೇಳಿದ್ದಾರೆ.
ಇನ್ನೊಂದೆಡೆ ಮಹಿಂದಾ ರಾಜಪಕ್ಸ ಹಾಗೂ ಅವರ ಸಹವರ್ತಿಗಳು ಶ್ರೀಲಂಕಾದ ನೌಕಾ ನೆಲೆಯಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಕೆಲ ವರದಿಗಳು ಹೇಳಿವೆ.
ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಬೀದಿಗಿಳಿದಿರುವ ಜನ ಶ್ರೀಲಂಕಾದಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆ, ಸಾರ್ವಜನಿಕ ಆಸ್ತಿ ಲೂಟಿ ಮತ್ತು ಹಾನಿ ಉಂಟು ಮಾಡುವವರಿಗೆ ಕಂಡಲ್ಲಿ ಗುಂಡಿಡಲು ಅಲ್ಲಿನ ರಕ್ಷಣಾ ಸಚಿವಾಲಯ ಆದೇಶಿಸಿದೆ.
ಪ್ರತಿಭಟನಾಕಾರರು ಆಡಳಿತ ಪಕ್ಷದ ರಾಜಕಾರಣಿಗಳ ಮನೆಗಳನ್ನು ಟಾರ್ಗೆಟ್ ಮಾಡಿದ ಬಳಿಕ ಈ ಆದೇಶ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.