ನವದೆಹಲಿ: ‘ಪ್ರಸಕ್ತ ವರ್ಷದಲ್ಲಿ 18 ಲಕ್ಷ ಭಾರತೀಯ ಮುಸ್ಲಿಮರು ಪವಿತ್ರ ಮೆಕ್ಕಾ ಯಾತ್ರೆ ಕೈಗೊಂಡಿದ್ದು, ಇದು ಜಾಗತಿಕ ಮಟ್ಟದಲ್ಲೇ 3ನೇ ಅತಿ ಹೆಚ್ಚಿನ ಸಂಖ್ಯೆಯಾಗಿದೆ’ ಎಂದು ಸೌದಿ ಅರೇಬಿಯಾ ಸರ್ಕಾರದ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ಉಮ್ರಾ (ಮೆಕ್ಕಾ ಯಾತ್ರೆ) ವರ್ಷದ ಯಾವುದೇ ಸಮಯದಲ್ಲಿ ಕೈಗೊಳ್ಳಬಹುದಾಗಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಸಂಖ್ಯೆಯ ಯಾತ್ರಿಗಳು ಭೇಟಿ ನೀಡಿದ ಮೊದಲ ಎರಡು ದೇಶಗಳ ಹೆಸರನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.
ಸೌದಿ ಅರೇಬಿಯಾದ ಹಜ್ ಹಾಗೂ ಉಮ್ರಾದ ಸಚಿವ ಡಾ. ತೌಫಿಕ್ ಬಿನ್ ಫಝಾನ್ ಅಲ್ ರಾಬಿಯಾ ಅವರು ಡಿಸೆಂಬರ್ 4ರಂದು ಭಾರತಕ್ಕೆ ಭೇಟಿ ನೀಡಿದ್ದರು. ಏಕೀಕೃತ ಸರ್ಕಾರಿ ವೇದಿಕೆ ಆಯೋಜಿಸಿದ್ದ ‘ನುಸುಕ್‘ನಲ್ಲಿ ಅವರು ಪಾಲ್ಗೊಂಡಿದ್ದರು.
ಪವಿತ್ರ ಯಾತ್ರೆ ಕೈಗೊಳ್ಳುವವರಿಗೆ ಸೌದಿ ಸರ್ಕಾರ ನೀಡುತ್ತಿರುವ ಸೌಕರ್ಯಗಳ ಕುರಿತು ಅವರು ಆ ಕಾರ್ಯಕ್ರಮದಲ್ಲಿ ತಿಳಿಸಿದ್ದರು. ಉಮ್ರಾ ಮತ್ತು ಪ್ರವಾದಿ ಅವರ ಮಸೀದಿಗೆ ಭೇಟಿ ನೀಡುವವರ ಅನುಕೂಲಕ್ಕಾಗಿ ಎಲೆಕ್ಟ್ರಾನಿಕ್ ವೀಸಾ ಮತ್ತು ಸ್ವಯಂಚಾಲಿತ ಪ್ರವೇಶ ಸೌಲಭ್ಯಗಳನ್ನು ಹೊಂದಿರುವ ನುಸುಕ್ ಕುರಿತು ಡಾ. ತೌಫಿಕ್ ವಿವರಿಸಿದ್ದರು.
ಇದಾದ ಬಳಿಕ ಉಮ್ರಾ ಯಾತ್ರೆ ಕೈಗೊಳ್ಳುವವರಿಗೆ ನೆರವಾಗುವ ಖಾಸಗಿ ಕಂಪನಿಗಳಿಗೆ ತರಬೇತಿ ಹಾಗೂ ಯಾತ್ರಿಗಳ ಸಂಪರ್ಕ ಹೊಂದುವ ಸೌಲಭ್ಯಗಳ ಕುರಿತು ತರಬೇತಿಯನ್ನೂ ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.