ಒಟ್ಟಾವಾ: ಖಾಲಿಸ್ತಾನ ಪರ ಹೋರಾಟಗಾರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ ಸಂಬಂಧ ಬಂಧಿಸಲಾಗಿರುವ ಭಾರತ ಮೂಲದ 4ನೇ ಆರೋಪಿಯನ್ನು ಕೆನಡಾದ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಶಂಕಿತ ಆರೋಪಿ, ಅಮನ್‌ದೀಪ್ ಸಿಂಗ್‌ನನ್ನು (22) ಬುಧವಾರ ಸರ್ರೆ ನ್ಯಾಯಾಲಯದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗಿತ್ತು. ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪ್ರಕರಣದಲ್ಲಿ ಈವರೆಗೆ ಬಂಧಿತರಾಗಿರುವ ಮೂವರು ಆರೋಪಿಗಳೊಂದಿಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಆದೇಶಿಸಿದೆ.
ಕೆನಡಾ ನಿವಾಸಿ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು 2023ರ ಜೂನ್ 18ರಂದು ಹತ್ಯೆಗೈಯಲಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಕೆನಡಾ ನಡುವಣ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿತ್ತು.
ಪ್ರಕರಣ ಸಂಬಂಧ ಮೇ 21ರಂದು ಕರಣ್ ಬ್ರಾರ್ (22), ಕಮಲ್‌ಪ್ರೀತ್ ಸಿಂಗ್ (22) ಮತ್ತು ಕರಣ್‌ಪ್ರೀತ್ ಸಿಂಗ್ (28) ಎಂಬ ಮೂವರು ಭಾರತೀಯ ಪ್ರಜೆಗಳನ್ನು ಬಂಧಿಸಲಾಗಿದೆ. ಇವರ ವಿರುದ್ಧ ಕೊಲೆ ಮತ್ತು ಕೊಲೆಗೆ ಸಂಚು ಆರೋಪ ಹೊರಿಸಲಾಗಿದೆ.
ಅಲ್ಲದೇ ಪ್ರಕರಣದಲ್ಲಿ ನಾಲ್ಕನೇ ಆರೋಪಿ ಅಮನ್‌ದೀಪ್‌ನನ್ನು ಮೇ 11ರಂದು ಬಂಧಿಸಲಾಗಿದೆ. ಈತನ ವಿರುದ್ಧವೂ ಕೊಲೆ ಮತ್ತು ಕೊಲೆಗೆ ಸಂಚು ರೂಪಿಸಿದ ಆರೋಪ ಹೊರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.