ಲಂಡನ್ (ಪಿಟಿಐ): ಭಾರತ ಮೂಲದ, ಲಂಡನ್‌ನ ಲೇಖಕಿ ಚೇತನಾ ಮಾರೂ ಅವರ ಪ್ರಥಮ ಕಾದಂಬರಿ ‘ವೆಸ್ಟರ್ನ್ ಲೇನ್’, 2023ನೇ ಸಾಲಿನ ಬೂಕರ್ ಪ್ರಶಸ್ತಿ ಸ್ಪರ್ಧೆಯಲ್ಲಿರುವ 13 ಕೃತಿಗಳ ಪಟ್ಟಿಗೆ ಸೇರ್ಪಡೆಯಾಗಿದೆ.
ಅಂತಿಮ ಸ್ಪರ್ಧೆಯಲ್ಲಿರುವ 13 ಕೃತಿಗಳ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ. 11 ವರ್ಷ ವಯಸ್ಸಿನ ಬಾಲಕಿ ಗೋಪಿ ಮತ್ತು ಕುಟುಂಬದ ಜೊತೆಗೆ ಆಕೆಯ ಕುಟುಂಬದ ಒಡನಾಟ, ಸಂಬಂಧ ಕಾದಂಬರಿಯ ವಸ್ತು.
‘ಬ್ರಿಟಿಷ್ ಗುಜರಾತಿ ಸಾಮಾಜಿಕ ಪರಿಸರದ ಹಿನ್ನೆಲೆಯ ಚಿತ್ರಣವುಳ್ಳ ಈ ಕಾದಂಬರಿಯಲ್ಲಿ ಭಾವನೆಗಳ ತಾಕಲಾಟದ ಅಭಿವ್ಯಕ್ತಿಗೆ ರೂಪಕವಾಗಿ ಸ್ಕ್ವಾಶ್ ಕ್ರೀಡೆಯು ಬಳಕೆಯಾಗಿದೆ’ ಎಂದು ಬೂಕರ್ ಪ್ರಶಸ್ತಿಯ ತೀರ್ಪುಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಸ್ತು ಮತ್ತು ರೂಪಕವಾಗಿ ಸ್ಕ್ವಾಶ್ ಕ್ರೀಡೆಯನ್ನು ಕೌಶಲಯುಕ್ತವಾಗಿ ಬಳಸಲಾಗಿದೆ. ಕುಟುಂಬ ಸಂಬಂಧವನ್ನು ಪರಿಣಾಮಕಾರಿಯಾಗಿ ಕೃತಿ ಬಿಂಬಿಸಿದೆ ಎಂದು ಕೆನಡಾದ ಲೇಖಕ, ತೀರ್ಪುಗಾರ ಮಂಡಳಿಯಲ್ಲಿರುವ ಎಸಿ ಎಡುಗ್ಯಾನ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಅಕ್ಟೋಬರ್ 2022ರಿಂದ ಸೆಪ್ಟೆಂಬರ್ 2023ರವರೆಗೆ ಪ್ರಕಟವಾಗಿರುವ 163 ಕೃತಿಗಳು ಪ್ರಶಸ್ತಿಗೆ ಪ್ರವೇಶ ಪಡೆದಿದ್ದವು. ಈ ಪೈಕಿ 13 ಕೃತಿಗಳು ಪ್ರಶಸ್ತಿಯ ಅಂತಿಮ ಸ್ಪರ್ಧೆಯ ಪಟ್ಟಿಯಲ್ಲಿವೆ.
ಪ್ರಶಸ್ತಿ ವಿಜೇತ ಕೃತಿಯ ವಿವರವನ್ನು ನವೆಂಬರ್ 26ರಂದು ಲಂಡನ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಕಟಿಸಲಾಗುತ್ತದೆ. ಪ್ರಶಸ್ತಿಯು ‘ಐರಿಸ್’ ಫಲಕ, 50 ಸಾವಿರ ಪೌಂಡ್ ಸ್ಟರ್ಲಿಂಗ್ (ಸುಮಾರು ₹ 52.59 ಲಕ್ಷ) ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.