ವಾಷಿಂಗ್ಟನ್: ಅಮೆರಿಕದ ನಾರ್ತ್ ಕರೊಲಿನಾ ರಾಜ್ಯದಲ್ಲಿ ಬಾಲಕನೊಬ್ಬ ಅಂಗಡಿಯಲ್ಲಿ ದರೋಡೆ ನಡೆಸಿದ ನಂತರ ಭಾರತೀಯ ಮೂಲದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏರ್‌ಪೋರ್ಟ್ ರಸ್ತೆಯಲ್ಲಿರುವ ತಂಬಾಕು ಹೌಸ್ ಸ್ಟೋರ್ ಮಾಲೀಕ ಮೈನಾಂಕ್ ಪಟೇಲ್ (36) ಮಂಗಳವಾರ ಬೆಳಿಗ್ಗೆ ಗುಂಡಿನ ದಾಳಿಯ ನಂತರ ಮೃತಪಟ್ಟಿದ್ದಾರೆ ಎಂದು ‘ಸಾಲಿಸ್‌ಬರಿ ಪೋಸ್ಟ್’ ವರದಿ ಮಾಡಿದೆ.
ಗುಂಡಿನ ದಾಳಿ ನಡೆಸಿದ, ಕಾನೂನು ಸಂಘರ್ಷಕ್ಕೆ ಸಿಲುಕಿರುವ ಬಾಲಕನನ್ನು ಬಂಧಿಸಲಾಗಿದೆ. ಬಾಲಕನ ಹೆಸರನ್ನು ಬಹಿರಂಗಪಡಿಸಿಲ್ಲ.
ಗುಂಡಿನ ದಾಳಿ ನಡೆದ ಬಗ್ಗೆ ಮಾಹಿತಿ ದೊರೆತ ಬಳಿಕ ಅಧಿಕಾರಿಗಳು ಸ್ಥಳಕ್ಕೆ ಹೋದಾಗ, ಮೈನಾಂಕ್ ದೇಹದ ಮೇಲೆ ಹಲವು ಕಡೆ ಗುಂಡೇಟುಗಳು ಬಿದ್ದು ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿ ಕ್ಯಾಪ್ಟನ್ ಮಾರ್ಕ್ ಮೆಕ್‌ಡೇನಿಯಲ್ ತಿಳಿಸಿದ್ದಾರೆ.
ಮೈನಾಂಕ್ ಪಟೇಲ್ ಅವರಿಗೆ ಪತ್ನಿ ಅಮಿ ಮತ್ತು 5 ವರ್ಷ ಮಗಳು ಇದ್ದಾರೆ. ಪತ್ನಿ ಏಳೂವರೆ ತಿಂಗಳ ಗರ್ಭಿಣಿ. ಸ್ಥಳೀಯರ ನೆರವಿಗೆ ಧಾವಿಸುತ್ತಾ, ಎಲ್ಲರಿಗೂ ಪ್ರೀತಿಪಾತ್ರರಾಗಿದ್ದ ಮೈನಾಂಕ್ ಅವರನ್ನು ಸ್ಥಳೀಯರು ‘ಮೈಕ್’ ಎಂದೇ ಕರೆಯುತ್ತಿದ್ದರು. ಅವರ ಸಾವಿಗೆ ಸ್ಥಳೀಯ ಸಮುದಾಯವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.