ಲಂಡನ್ : ಉದ್ಯೋಗದ ಆಮಿಷವೊಡ್ಡಿ ಮಹಿಳೆಯರನ್ನು ಸೆಳೆದು ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಭಾರತ ಮೂಲದ, ಮಸಾಜ್ ಪಾರ್ಲರ್‌ನ ಮಾಲೀಕನೊಬ್ಬನಿಗೆ ಸ್ಥಳೀಯ ವುಡ್ ಗ್ರೀನ್ ಕ್ರೌನ್ ನ್ಯಾಯಾಲಯ 18 ವರ್ಷದ ಸಜೆ ವಿಧಿಸಿದೆ.
50 ವರ್ಷದ ರಘು ಸಿಂಗಮನೇನಿ ಶಿಕ್ಷೆಗೊಳಗಾದ ವ್ಯಕ್ತಿ. ಉದ್ಯೋಗದ ಆಮಿಷವೊಡ್ಡಿ ನಾಲ್ವರು ಮಹಿಳೆಯರನ್ನು ಸೆಳೆದಿದ್ದ ಈತ ಆವರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಎಸಗಿದ್ದ ಎಂದು ತನಿಖೆ ನಡೆಸಿದ್ದ ಸ್ಕಾಟ್‌ಲ್ಯಾಂಡ್ ಯಾರ್ಡ್, ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿತ್ತು.
ವುಡ್‌ಗ್ರೀನ್ ಮತ್ತು ಐಲಿಂಗ್ಟನ್‌ನಲ್ಲಿ ರಘು ಎರಡು ಮಸಾಜ್ ಪಾರ್ಲರ್ ನಡೆಸುತ್ತಿದ್ದ. ಉದ್ಯೋಗಾವಕಾಶ ಕುರಿತು ಆ್ಯಪ್‌ನಲ್ಲಿ ಜಾಹೀರಾತು ನೀಡುತ್ತಿದ್ದ. ಉದ್ಯೋಗ ನಿರೀಕ್ಷಿಸಿ ಬಂದ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದ ಎಂದು ಮೆಟ್ರೊಪಾಲಿಟನ್ ಪೊಲೀಸರು ತಿಳಿಸಿದ್ದಾರೆ.
17 ವರ್ಷದ ಇಬ್ಬರು, 19 ಹಾಗೂ 23 ವರ್ಷದ ಒಬ್ಬರ ಮೇಲೆ ಹೀಗೆ ದೌರ್ಜನ್ಯ ಎಸಗಿದ್ದ. ಸಂತ್ರಸ್ತರ ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅತ್ಯಾಚಾರ, ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಯತ್ನ ಆರೋಪ ಪ್ರಕರಣಗಳಲ್ಲಿ ಈತನಿಗೆ ಸಜೆ ವಿಧಿಸಲಾಗಿದೆ ಎಂದು ಕೋರ್ಟ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.