ಲಂಡನ್: ಬ್ರಿಟನ್ ಪ್ರಧಾನ ಮಂತ್ರಿ ಸ್ಥಾನಕ್ಕೆ ಬಾರತೀಯ ಮೂಲದ ಹಾಗೂ ಬ್ರಿಟನ್ ಸಂಸದ ರಿಷಿ ಸುನಕ್ ಹೆಸರು ಪ್ರಬಲವಾಗಿ ಕೇಳಿ ಬರುತ್ತಿರುವ ಬೆನ್ನಲ್ಲೇ ಅವರ ಆಯ್ಕೆ ಬಹುತೇಕ ಖಚಿತ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಅರ್ಧಕ್ಕೂ ಹೆಚ್ಚು ಪ್ರಮಾಣದ ಟೋರಿ ಸಂಸದರು ರಿಷಿ ಪರವಾಗಿ ಕಂಡು ಬಂದಿದ್ದರಿಂದ ರಿಷಿ ಸುನಕ್ ಅವರು ಬ್ರಿಟನ್ ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ ಎಂದು ವರದಿಗಳು ಹೇಳಿವೆ.
ಅತ್ತ ಸಂಸದೆ ಪೆನ್ನಿ ಮೋರ್ಡಾಂಟ್ ಕೂಡ ಪ್ರಧಾನಿ ಸ್ಪರ್ಧೆಯಲ್ಲಿದ್ದು ಅವರಿಗೆ ಟೋರಿ ಸಂಸದರ ಬೆಂಬಲ ಕಡಿಮೆ ಇದೆ ಎಂದು ತಿಳಿದು ಬಂದಿದೆ.
ದೊಡ್ಡ ಸವಾಲಿನ ಸಮಯದಲ್ಲಿ ನಾವು ಒಗ್ಗೂಡಬೇಕು.ನಮ್ಮ ಮುಂದಿನ ಪ್ರಧಾನಿಯಾಗಲು ನಮ್ಮ ಸಂಸದೀಯ ಪಕ್ಷದ ಬಹುಪಾಲು ಬೆಂಬಲ ರಿಷಿ ಸುನಕ್ ಅವರಿಗೆ ಇದೆ ಎಂಬುದು ಸ್ಪಷ್ಟವಾಗಿದೆ.ಅವರು ಅದಕ್ಕಾಗಿ ಅಗತ್ಯವಾದ ಪರಿಣತಿ ಮತ್ತು ಅನುಭವವನ್ನು ಹೊಂದಿದ್ದಾರೆ ಎಂದು ಕನ್ಸರ್ವೇಟಿವ್ ಪಾರ್ಟಿ ನಿಕಟಪೂರ್ವ ಅಧ್ಯಕ್ಷ ಬ್ರಾಂಡನ್ ಲೇವಿಸ್ ಟ್ವೀಟ್ ಮಾಡಿದ್ದಾರೆ.
ಬೋರಿಸ್ ಜಾನ್ಸನ್ ತಾವು ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಪುನರಾಯ್ಕೆ ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ರಿಷಿ ಸುನಕ್ ಅವರ ದಾರಿ ಸುಗಮವಾಗಿದೆ.
ಸೋಮವಾರ ಸಂಜೆ ರಿಷಿ ಸುನಕ್ ಅವರ ಅಧಿಕೃತ ಆಯ್ಕೆಬಗ್ಗೆ ಪ್ರಕಟಣೆ ಹೊರಬೀಳಲಿದ್ದು, ಅ.28 ರಂದು ಪ್ರಮಾಣವಚನ ಸ್ವೀಕರಿಸಬಹುದು ಎಂದು ವರದಿಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.