ADVERTISEMENT

ಆಫ್ಗನ್‌ ಕಾಳಗ: ಭಾರತೀಯ ಫೋಟೊ ಜರ್ನಲಿಸ್ಟ್‌ ಸಾವು

ಪಿಟಿಐ
Published 16 ಜುಲೈ 2021, 10:29 IST
Last Updated 16 ಜುಲೈ 2021, 10:29 IST
ಡ್ಯಾನಿಷ್ ಸಿದ್ದಿಕಿಚಿತ್ರ: ಸಿದ್ದಿಕಿ ಟ್ವಿಟರ್ ಖಾತೆ
ಡ್ಯಾನಿಷ್ ಸಿದ್ದಿಕಿಚಿತ್ರ: ಸಿದ್ದಿಕಿ ಟ್ವಿಟರ್ ಖಾತೆ   

ಕಾಬೂಲ್‌: ಅಫ್ಗಾನಿಸ್ತಾನದ ಸೇನೆ ಮತ್ತು ತಾಲಿಬಾನಿಗಳ ನಡುವೆ ಸಂಘರ್ಷ ನಡೆಯುತ್ತಿರುವ ಪ್ರದೇಶಗಳ ಸ್ಥಿತಿಗತಿ ಕುರಿತು ವರದಿ ಮಾಡಲು ತೆರಳಿದ್ದ ಪುಲಿಟ್ಜರ್‌ ಪ್ರಶಸ್ತಿ ಪುರಸ್ಕೃತ ಭಾರತೀಯ ಫೋಟೊ ಜರ್ನಲಿಸ್ಟ್‌, ರಾಯಿಟರ್ಸ್‌ ಸುದ್ದಿ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದ ಡ್ಯಾನಿಷ್ ಸಿದ್ದಕಿ (40) ಅವರು ಗುರುವಾರ ರಾತ್ರಿ ಹತ್ಯೆಯಾಗಿದ್ದಾರೆ.

’ಕಂದಹಾರ್‌ನ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ, ಆಫ್ಗನ್‌ ಸೇನೆ ಮತ್ತು ತಾಲಿಬಾನಿಗಳ ನಡುವೆ ನಡುವಿನ ಭೀಕರ ಕದನದ ದೃಶ್ಯವನ್ನು ಸೆರೆಹಿಡಿಯಲು ಅವರು ತೆರಳಿದ್ದರು’ ಎಂದು ಟೊಲೊ ನ್ಯೂಸ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಅಫ್ಗಾನಿಸ್ತಾನದ ಸ್ಪಿನ್ ಬೋಲ್ಡಾಕ್ ಜಿಲ್ಲೆಯನ್ನು ತಾಲಿಬಾನ್ ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ, ಕಳೆದ ಒಂದು ವಾರದಿಂದ ಅಫ್ಗನ್‌ ಸೇನೆ ಮತ್ತು ತಾಲಿಬಾನಿಗಳ ನಡುವೆ ತೀವ್ರ ಸಂಘರ್ಷ ನಡೆಯುತ್ತಿದೆ. ಮುಂಬೈ ಮೂಲದ ಡ್ಯಾನಿಷ್ ಸಿದ್ದಕಿ, ಕೆಲವು ದಿನಗಳ ಹಿಂದೆ ಈ ಯುದ್ಧಪೀಡಿತ ಕಂದಾಹಾರ್ ಪರಿಸ್ಥಿತಿ ಕುರಿತು ವರದಿ ಮಾಡಲು ತೆರಳಿದ್ದರು.

ADVERTISEMENT

ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದ ಡ್ಯಾನಿಷ್ ಅವರು, 2007 ರಲ್ಲಿ ಜಾಮಿಯಾದ ಎಜೆಕೆ ಸಮೂಹ ಸಂವಹನ ಸಂಶೋಧನಾ ಕೇಂದ್ರದಿಂದ ಸಮೂಹ ಸಂಹವನ ವಿಷಯದಲ್ಲೂ ಪದವಿ ಪಡೆದಿದ್ದರು.

ಟಿವಿ ವಾಹಿನಿಯ ವರದಿಗಾರರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದ ಸಿದ್ದಿಕಿ, ನಂತರ ಫೋಟೊ ಜರ್ನಲಿಸ್ಟ್‌ ಆಗಿ ವೃತ್ತಿಯನ್ನು ಬದಲಿಸಿ, 2010 ರಲ್ಲಿ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ’ಇಂಟರ್ನಿ’ಯಾಗಿ ಸೇರಿದ್ದರು. ಅದೇ ಸಂಸ್ಥೆಯ ಸ್ಟಾಫ್‌ ಫೋಟೊಗ್ರಾಫರ್‌ ಆಗಿ ಪುಲಿಟ್ಜರ್‌ ಪ್ರಶಸ್ತಿಗೂ ಭಾಜನರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.