ADVERTISEMENT

199 ಭಾರತೀಯ ಮೀನುಗಾರರ ಬಿಡುಗಡೆ ಮಾಡಲಿರುವ ಪಾಕ್‌

ಪಿಟಿಐ
Published 8 ಮೇ 2023, 12:33 IST
Last Updated 8 ಮೇ 2023, 12:33 IST
   

ಕರಾಚಿ: ಪಾಕಿಸ್ತಾನದಲ್ಲಿ ಅಕ್ರಮವಾಗಿ ಮೀನುಗಾರಿಕೆಯಲ್ಲಿ ತೊಡಗಿದ್ದ ಆರೋಪದಡಿ ಬಂಧಿತರಾಗಿರುವ 199 ಭಾರತೀಯ ಮೀನುಗಾರರನ್ನು ಮೇ 12ರಂದು ಬಿಡುಗಡೆ ಮಾಡುವುದಾಗಿ ಪಾಕಿಸ್ತಾನ ಹೇಳಿದೆ. ಬಂಧಿತರಾಗಿದ್ದವರ ಪೈಕಿ ಒಬ್ಬರು ಮೃತಪಟ್ಟ ಬೆನ್ನಲ್ಲೇ ಅಧಿಕಾರಿಗಳು ಈ ಹೇಳಿಕೆ ನೀಡಿದ್ದಾರೆ.

ಪ್ರಸ್ತುತ ಲಾಂಧಿ ಜೈಲಿನಲ್ಲಿರುವ ಭಾರತೀಯ ಮೀನುಗಾರರನ್ನು ಶುಕ್ರವಾರ ವಾಘಾ ಗಡಿಯ ಮೂಲಕ ಭಾರತೀಯ ಅಧಿಕಾರಿಗಳ ಸುಪರ್ದಿಗೆ ಒಪ್ಪಿಸಲಾಗುವುದು. ಬಿಡುಗಡೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಸಚಿವಾಲಯಕ್ಕೆ ಸೂಚಿಸಲಾಗಿದೆ ಎಂದು ಸಿಂಧ್‌ನ ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿ ಕಾಜಿ ನಾಜಿರ್ ಮಾಹಿತಿ ನೀಡಿದ್ದಾರೆ.

ಬಿಡುಗಡೆ ಆಗಬೇಕಾದವರ ಪಟ್ಟಿಯಲ್ಲಿದ್ದ ಜುಲ್ಫಿಕರ್‌ ಅನಾರೋಗ್ಯದಿಂದ ಕರಾಚಿ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ.

ADVERTISEMENT

ಶಾಂತಿ ಮತ್ತು ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದ ಪಾಕಿಸ್ತಾನ– ಭಾರತ ನಾಗರಿಕರ  ವೇದಿಕೆ ಪ್ರಕಾರ, ಒಟ್ಟು 654 ಭಾರತೀಯ ಮೀನುಗಾರರು ಕರಾಚಿ ಜೈಲಿನಲ್ಲಿದ್ದಾರೆ. ಈ ಪೈಕಿ 631 ಮಂದಿಯ ಶಿಕ್ಷೆ ಅವಧಿ ಪೂರ್ಣಗೊಂಡಿದ್ದು, ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಭಾರತದ ಜೈಲುಗಳಲ್ಲಿ ಪಾಕಿಸ್ತಾನದ  83 ಮೀನುಗಾರರು ಇದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.