ನ್ಯೂಯಾರ್ಕ್: ಬೋಸ್ಟನ್ ನಗರದಲ್ಲಿ ಅಭಿಜಿತ್ ಪರುಚುರು ಎನ್ನುವ ಭಾರತೀಯ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದು, ಕ್ರಿಮಿನಲ್ ಅಪರಾಧ ಕೃತ್ಯವು ಈ ವಿದ್ಯಾರ್ಥಿಯ ಸಾವಿಗೆ ಕಾರಣ ಅಲ್ಲ ಎಂದು ಪ್ರಾಥಮಿಕ ತನಿಖೆ ಕೈಗೊಂಡ ಅಧಿಕಾರಿಗಳು ಹೇಳಿದ್ದಾರೆ.
‘ಅಭಿಜಿತ್ ಅವರ ಪಾಲಕರು ಕನೆಕ್ಟಿಕಟ್ ನಿವಾಸಿಗಳು. ಅವರು ಪತ್ತೆದಾರರ ಜೊತೆ ನೇರ ಸಂಪರ್ಕದಲ್ಲಿದ್ದಾರೆ’ ಎಂದು ನ್ಯೂಯಾರ್ಕ್‌ನಲ್ಲಿ ಇರುವ ಭಾರತದ ರಾಯಭಾರ ಕಚೇರಿ ಹೇಳಿದೆ.
ಅಭಿಜಿತ್ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರವನ್ನು ಆಂಧ್ರಪ್ರದೇಶದ ತೆನಾಲಿಯಲ್ಲಿ ಈಗಾಗಲೇ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ. ಅಮೆರಿಕ ಮೂಲದ ಟೀಮ್ ಏಯ್ಡ್ ಸಂಸ್ಥೆಯು ಅಭಿಜಿತ್ ಅವರ ಮೃತದೇಹವನ್ನು ಭಾರತಕ್ಕೆ ತರಲು ನೆರವಾಗಿತ್ತು.
2024ರ ಆರಂಭದಿಂದ ಇದುವರೆಗೆ ಭಾರತೀಯ ಹಾಗೂ ಭಾರತ ಮೂಲದ ಕನಿಷ್ಠ ಆರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಭಾರತ ಮೂಲದವರ ಮೇಲೆ ದಾಳಿಗಳು ಹೆಚ್ಚಾಗಿರುವುದು ಸಮುದಾಯದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಭಾರತೀಯರು ಹಾಗೂ ಭಾರತ ಮೂಲದ ವ್ಯಕ್ತಿಗಳು, ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಗಳ ಪರಿಣಾಮವಾಗಿ ವಾಷಿಂಗ್ಟನ್‌ನಲ್ಲಿ ಇರುವ ಭಾರತೀಯ ರಾಯಭಾರ ಕಚೇರಿಯು ವರ್ಚುವಲ್ ಆಗಿ ಸಭೆಯೊಂದನ್ನು ಆಯೋಜಿಸಿತ್ತು. ಅಮೆರಿಕದ ವಿವಿಧೆಡೆ ಇರುವ ಭಾರತೀಯ ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.