ನ್ಯೂಯಾರ್ಕ್: ನ್ಯೂಜೆರ್ಸಿಯಲ್ಲಿರುವ ಕಟ್ಟಡವೊಂದರಲ್ಲಿ ಉಂಟಾದ ಬೆಂಕಿ ಅವಘಡದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ತೀವ್ರ ಸಂಕಷ್ಟ ಎದುರಿಸಿರುವ ಕುರಿತು ವರದಿಯಾಗಿದೆ.
ನ್ಯೂಜೆರ್ಸಿಯ 77 ನೆಲ್ಸನ್ ಅವೆನ್ಯೂದಲ್ಲಿರುವ ಕಟ್ಟಡದ ನೆಲಮಾಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಕೆಲವೇ ಕ್ಷಣಗಳಲ್ಲಿ ಅದು ಮೊದಲ ಹಾಗೂ 2ನೇ ಮಹಡಿಗೆ ವ್ಯಾಪಿಸಿತು.
ಅಗ್ನಿ ಆಕಸ್ಮಿಕ ಈ ಕಟ್ಟಡವೊಂದೇ ಅಲ್ಲದೆ, ಅಕ್ಕ ಪಕ್ಕದ ಕಟ್ಟಡಗಳಿಗೂ ವ್ಯಾಪಿಸಿದ ಪರಿಣಾಮ ಅಲ್ಲಿನ ನಿವಾಸಿಗಳೂ ಪರದಾಡಿದರು. ಘಟನೆಯಲ್ಲಿ ಅಲ್ಲಿನ ನಿವಾಸಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಯಾವುದೇ ಗಾಯಗಳಾದ ಕುರಿತು ವರದಿಯಾಗಿಲ್ಲ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ನ್ಯೂಯಾರ್ಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ‘ಇದೊಂದು ದುರದೃಷ್ಟಕರ ಘಟನೆ. ಗುರುವಾರ ನಡೆದ ಈ ಘಟನೆಯಲ್ಲಿ ಸಿಲುಕಿದ್ದ ಭಾರತೀಯ ಮೂಲದ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಸುರಕ್ಷಿತವಾಗಿದ್ದರೆ. ಯಾರಿಗೂ ಯಾವುದೇ ರೀತಿಯ ಹಾನಿಯಾಗಿಲ್ಲ’ ಎಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿದೆ.
‘ಅಗ್ನಿ ಅವಘಡ ಸಂಭವಿಸಿದ ಕಟ್ಟಡದಲ್ಲಿ 11 ಭಾರತೀಯ ವಿದ್ಯಾರ್ಥಿಗಳು ಹಾಗೂ ಉದ್ಯೋಗಿ ದಂಪತಿ ಇದ್ದರು ಎಂದೆನ್ನಲಾಗಿದೆ. ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅವರಿಗೆ ವಸತಿ ಹಾಗೂ ಅಗತ್ಯ ದಾಖಲಾತಿಗಳು ಸೇರಿದಂತೆ ಇನ್ನಿತರ ನೆರವು ನೀಡಲಾಗುತ್ತಿದೆ’ ಎಂದು ರಾಯಭಾರ ಕಚೇರಿ ಹೇಳಿದೆ.
ಅಮೆರಿಕದ ರೆಡ್ ಕ್ರಾಸ್ ಸಂಸ್ಥೆಯು 14 ನಿವಾಸಿಗಳಿಗೆ ವಸತಿ ಸೌಕರ್ಯ ಕಲ್ಪಿಸಿದೆ. ಅಗ್ನಿ ಆಕಸ್ಮಿಕ ಸಂಭವಿಸಿದ ಕಟ್ಟಡದಲ್ಲಿ ಸಿಲುಕಿದ್ದ ಒಂದು ಬೆಕ್ಕನ್ನೂ ಸುರಕ್ಷಿತವಾಗಿ ಹೊರಕ್ಕೆ ತರಲಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.