ಜಕಾರ್ತ:ಇಂಡೊನೇಷ್ಯಾದಲ್ಲಿ ಸಮುದ್ರಕ್ಕೆ ಪತನಗೊಂಡ ವಿಮಾನದ ಪೈಲಟ್ ಆಗಿದ್ದವರು ಭಾರತದ ಮೂಲದ ಭವ್ಯೆ ಸುನೆಜಾ ಎಂಬುದು ತಿಳಿದುಬಂದಿದೆ. ಇಂಡೊನೇಷ್ಯಾ ರಾಜಧಾನಿ ಜಕರ್ತದಿಂದ ಸೋಮವಾರ ಬೆಳಿಗ್ಗೆಸುಮಾತ್ರಾದ ಪಾಂಗ್‌ಕಲ್ ಪಿನಾಗ್ ದ್ವೀಪಕ್ಕೆ ಹೊರಟಿದ್ದ‘ಲಯನ್ ಏರ್ ಜೆಟಿ610’ ವಿಮಾನ ಸಮುದ್ರಕ್ಕೆ ಪತನಗೊಂಡಿತ್ತು.
‘ಜಕಾರ್ತ ಬಳಿ ಲಯನ್ ಏರ್ ವಿಮಾನ ದುರಂತದಲ್ಲಿ ಮೃತಪಟ್ಟವರ ಬಗ್ಗೆ ತೀವ್ರ ಸಂತಾಪವಿದೆ. ದುರದೃಷ್ಟಕರ ವಿಚಾರವೆಂದರೆ, ವಿಮಾನ ಚಲಾಯಿಸುತ್ತಿದ್ದ ಭಾರತೀಯ ಪೈಲಟ್ ಭವ್ಯೆ ಸುನೆಜಾ ಸಹ ದುರಂತದಲ್ಲಿ ಮೃತಪಟ್ಟಿದ್ದಾರೆ. ರಾಯಭಾರ ಕಚೇರಿಯು ವಿಪತ್ತು ಕೇಂದ್ರದ ಜತೆ ಸಂಪರ್ಕದಲ್ಲಿದ್ದು ಎಲ್ಲ ರೀತಿಯ ಸಹಕಾರ ನೀಡುತ್ತಿದೆ’ ಎಂದುಜಕಾರ್ತದಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
ಭವ್ಯೆ ಸುನೆಜಾ ಅವರು 2011ರಿಂದಲೂಲಯನ್ ಏರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅದಕ್ಕೂ ಮುನ್ನ ಎಮಿರೇಟ್ಸ್‌ನಲ್ಲಿ ಟ್ರೈನೀ ಪೈಲಟ್ ಆಗಿ ಕಾರ್ಯನಿರ್ವಹಿಸಿದ್ದರು. ಸುನೆಜಾ ಅವರು 6,000 ಗಂಟೆ ವಿಮಾನ ಚಲಾಯಿಸಿದ್ದ ಅನುಭವ ಹೊಂದಿದ್ದು, ಅವರ ಸಹ ಪೈಲಟ್ ಆಗಿದ್ದ ಇಂಡೊನೇಷ್ಯಾದ ಹಾರ್ವಿನೊ 5,000ಕ್ಕೂ ಹೆಚ್ಚು ಗಂಟೆ ವಿಮಾನ ಚಲಾಯಿಸಿದ್ದ ಅನುಭವ ಹೊಂದಿದ್ದರು ಎಂದು ಲಯನ್ ಏರ್ ಸಂಸ್ಥೆ ತಿಳಿಸಿದೆ.
ದೆಹಲಿ ಮೂಲದವರಾದ ಸುನೆಜಾ ಮಯೂರ್ ವಿಹಾರ್‌ನ ಅಹಲ್ಕಾನ್ ಪಬ್ಲಿಕ್ ಸ್ಕೂಲ್‌ನಲ್ಲಿ ಓದಿದ್ದರು.
ಜಕಾರ್ತದಿಂದ ಹೊರಟಲಯನ್ ಏರ್ ವಿಮಾನ ಟೇಕಾಫ್ ಆದ 13 ನಿಮಿಷಗಳ ಬಳಿಕ ಸಂಪರ್ಕ ಕಡಿದುಕೊಂಡಿತ್ತು. ದುರಂತದ ವೇಳೆ 189 ಪ್ರಯಾಣಿಕರು ವಿಮಾನದಲ್ಲಿದ್ದರು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.