ADVERTISEMENT

ಅಭಿವೃದ್ಧಿಶೀಲ ದೇಶಗಳಿಗೆ ಸ್ಪಂದನೆ ಭಾರತದ ಆದ್ಯತೆ

ಪಿಟಿಐ
Published 12 ನವೆಂಬರ್ 2024, 16:04 IST
Last Updated 12 ನವೆಂಬರ್ 2024, 16:04 IST
A women demonstrates with a sign on veganism at the COP29 U.N. Climate Summit, Tuesday, Nov. 12, 2024, in Baku, Azerbaijan. AP/PTI(AP11_12_2024_000043A)
A women demonstrates with a sign on veganism at the COP29 U.N. Climate Summit, Tuesday, Nov. 12, 2024, in Baku, Azerbaijan. AP/PTI(AP11_12_2024_000043A)   

ಬಾಕೂ (ಅಜರ್‌ಬೈಜಾನ್): ಅಭಿವೃದ್ಧಿ ಹೊಂದುತ್ತಿರುವ ದೇಶಗಳ ವಿಶಿಷ್ಟವಾದ ಅಗತ್ಯಗಳಿಗೆ ಸ್ಪಂದಿಸುವ ಕೆಲಸವು ‘ಸಿಒಪಿ29’ ಕಾರ್ಯಕ್ರಮದಲ್ಲಿ ಆಗಬೇಕು ಎಂದು ಭಾರತ ಬಯಸಿದೆ. ಹವಾಮಾನ ಅನುದಾನದಲ್ಲಿ ಬದಲಾವಣೆಗಳು ಆಗಬೇಕು ಎಂದು ಕೂಡ ಭಾರತ ಹೇಳಿದೆ.

ವಿಶ್ವಸಂಸ್ಥೆಯ ವಾರ್ಷಿಕ ಹವಾಮಾನ ಮಾತುಕತೆ ಕಾರ್ಯಕ್ರಮ ‘ಸಿಒಪಿ29’ರಲ್ಲಿ ಪಾಲ್ಗೊಳ್ಳಲು ಇಲ್ಲಿ 190ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಸೇರಿದ್ದಾರೆ.

ಹವಾಮಾನ ಬದಲಾವಣೆಯನ್ನು ನಿಯಂತ್ರಿಸುವ ಯತ್ನಗಳಲ್ಲಿ ಹಾಗೂ ಹವಾಮಾನ ಬದಲಾವಣೆ ತಡೆಗೆ ಸಂಬಂಧಿಸಿದ ಖರ್ಚುಗಳನ್ನು ಹೊರುವುದರಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು ಮುಂದೆ ನಿಲ್ಲಬೇಕು ಎಂದು ಭಾರತದ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ ಎಂಬುದನ್ನು ಮೂಲಗಳು ಹೇಳಿವೆ.

ADVERTISEMENT

ಅಭಿವೃದ್ಧಿ ಹೊಂದಿದ ದೇಶಗಳು ಹಿಂದಿನಿಂದಲೂ ಹೆಚ್ಚಿನ ಮಾಲಿನ್ಯಕಾರಕಗಳನ್ನು ಹೊರಹಾಕಿರುವ ಕಾರಣ ಅವು ಹೆಚ್ಚಿನ ಹೊಣೆಯನ್ನು ಹೊತ್ತುಕೊಳ್ಳಬೇಕು ಎಂಬುದು ಭಾರತದ ನಿಲುವು.

ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಅಗತ್ಯ ಪ್ರಮಾಣದಲ್ಲಿ ಹಣಕಾಸಿನ ನೆರವು ಲಭ್ಯವಾಗಬೇಕು ಎಂಬುದು ಕೂಡ ಭಾರತದ ಆದ್ಯತೆಗಳಲ್ಲಿ ಸೇರಿದೆ. 

ಸ್ಟೀಲ್ ಎಚ್ಚರಿಕೆ: ಹವಾಮಾನ ಬದಲಾವಣೆಯ ಆರ್ಥಿಕ ಪರಿಣಾಮಗಳು ಗಂಭೀರವಾಗಿವೆ ಎಂಬ ಎಚ್ಚರಿಕೆ ನೀಡಿರುವ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಮುಖ್ಯಸ್ಥ ಸೈಮನ್  ಸ್ಟೀಲ್ ಅವರು, ಹವಾಮಾನ ಬದಲಾವಣೆಯ ಪರಿಣಾಮವಾಗಿ ಹಣದುಬ್ಬರದ ಏರಿಕೆಯು ತೀವ್ರವಾಗಲಿದೆ ಎಂದು ಹೇಳಿದ್ದಾರೆ. ಇದನ್ನು ತಡೆಯಲು ದೇಶಗಳು ಇನ್ನಷ್ಟು ನಿರ್ಣಾಯಕವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

ದೇಶಗಳ ನೀತಿಗಳಲ್ಲಿ ಹವಾಮಾನ ಬದಲಾವಣೆ ಕುರಿತ ವಿಚಾರಗಳನ್ನು ಬದಿಗೆ ತಳ್ಳುವ ಧೋರಣೆಯನ್ನು ಸ್ಟೀಲ್ ಅವರು ಖಂಡಿಸಿದ್ದಾರೆ. ಹವಾಮಾನ ಬದಲಾವಣೆಯ ಬಿಕ್ಕಟ್ಟು ಅರ್ಥ ವ್ಯವಸ್ಥೆಗಳನ್ನು ಸಾಯಿಸುವ ಮಟ್ಟಕ್ಕಿದೆ. ಬೇರೆ ದೇಶಗಳ ಜಿಡಿಪಿ ಮೇಲೆ ಇದು ಶೇ 5ರವರೆಗೆ ಪರಿಣಾಮ ಉಂಟುಮಾಡಿದೆ ಎಂದು ಅವರು ವಿವರಿಸಿದ್ದಾರೆ.

ಮುಂದೆಂದೋ ಒಂದು ದಿನ ಆಗುತ್ತವೆ ಎನ್ನಲಾಗುತ್ತಿದ್ದ ಹವಾಮಾನ ಬದಲಾವಣೆಯ ಪರಿಣಾಮಗಳು, ಸದ್ಯದ ಆರ್ಥಿಕ ಬೆದರಿಕೆಯಾಗಿ ಪರಿಣಮಿಸಿವೆ ಎಂದು ಅವರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.