ವಿಶ್ವಸಂಸ್ಥೆ: 2060ನೇ ಇಸವಿ ವೇಳೆಗೆ ಭಾರತದ ಜನಸಂಖ್ಯೆ 170 ಕೋಟಿಗೆ ತಲುಪಲಿದೆ. ಆ ನಂತರ ಶೇ 12ರಷ್ಟು ಇಳಿಯಲಿದೆ. ಆದರೂ, ಜಗತ್ತಿನಲ್ಲಿ ಗರಿಷ್ಠ ಜನಸಂಖ್ಯೆಯುಳ್ಳ ದೇಶವಾಗಿಯೇ ಮುಂದುವರಿಯಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಗುರುವಾರ ಬಿಡುಗಡೆಯಾದ ‘ವಿಶ್ವ ಜನಸಂಖ್ಯಾ ನೋಟ –2024’ ವರದಿಯಲ್ಲಿ ಈ ಅಂಶ ಉಲ್ಲೇಖವಾಗಿದೆ. ಮುಂದಿನ 50–60 ವರ್ಷ ಜಗತ್ತಿನ ಜನಸಂಖ್ಯೆಯು ಏರುಗತಿಯಲ್ಲೇ ಇರಲಿದೆ. 2080ರ ಮಧ್ಯದಲ್ಲಿ 1,030 ಕೋಟಿಗೆ ತಲುಪಲಿದೆ. ನಂತರ ನಿಧಾನವಾಗಿ ಇಳಿಕೆಯಾಗುತ್ತಾ, ಈ ಶತಮಾನದ ಅಂತ್ಯದ ವೇಳೆ 1,020 ಕೋಟಿಗೆ ಇಳಿಕೆಯಾಗಲಿದೆ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ.
ಪ್ರಸ್ತುತ ಭಾರತದ ಜನಸಂಖ್ಯೆ 145 ಕೋಟಿ ಎಂದು ಅಂದಾಜಿಸಲಾಗಿದೆ. 2054ರ ವೇಳೆಗೆ ಇದು 169 ಕೋಟಿಗೆ ತಲುಪಲಿದೆ. ಆ ನಂತರ 2,100ರ ವೇಳೆಗೆ ಜನಸಂಖ್ಯೆಯು 150 ಕೋಟಿಗೆ ಇಳಿಕೆಯಾಗಲಿದೆ ಎಂದು ಅಂದಾಜಿಸಿದೆ.
ಚೀನಾ ಜನಸಂಖ್ಯೆ, ಭಾರಿ ಕುಸಿತ: ಪ್ರಸ್ತುತ ಚೀನಾದ ಜನಸಂಖ್ಯೆ 141 ಕೋಟಿ. 2054ರ ವೇಳೆಗೆ 121 ಕೋಟಿಗೆ ಇಳಿಕೆಯಾಗಲಿದೆ. 2100ರ ವೇಳೆಗೆ 63.3 ಕೋಟಿಗೆ ಕುಸಿಯಲಿದೆ ಎಂದು ತಿಳಿಸಿದೆ.
ಪ್ರಸ್ತುತ ಗರಿಷ್ಠ ಜನಸಂಖ್ಯೆಯುಳ್ಳ ಮೂರನೇ ದೇಶ ಅಮೆರಿಕ. ಅಲ್ಲಿ 34.5 ಕೋಟಿ ಜನಸಂಖ್ಯೆ ಇದೆ. 2054ರ ವೇಳೆಗೆ ಪಾಕ್ ಅಮೆರಿಕವನ್ನು ಹಿಂದಿಕ್ಕಿ 38.9 ಕೋಟಿ ಜನಸಂಖ್ಯೆ ಹೊಂದುವ ಅಂದಾಜಿದೆ ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.