ADVERTISEMENT

ಹಿಂದೂಗಳನ್ನು ಗುರಿಯಾಗಿಸಿಕೊಂಡು ದ್ವೇಷಾಪರಾಧ: ಕೆನಡಾ ಸಂಸದ ಚಂದ್ರ ಆರ್ಯ

ಪಿಟಿಐ
Published 21 ಸೆಪ್ಟೆಂಬರ್ 2023, 13:54 IST
Last Updated 21 ಸೆಪ್ಟೆಂಬರ್ 2023, 13:54 IST
<div class="paragraphs"><p>ಕೆನಡಾದ  ಸಂಸದ ಚಂದ್ರ ಆರ್ಯ</p></div>

ಕೆನಡಾದ ಸಂಸದ ಚಂದ್ರ ಆರ್ಯ

   

ಟೊರಾಂಟೊ: ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಹೆಸರಿನಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಕೆನಡಾದಲ್ಲಿ ದ್ವೇಷಾಪರಾಧಗಳನ್ನು ನಡೆಸಲಾಗುತ್ತಿದೆ ಎಂದು ಅಲ್ಲಿಯ ಪ್ರಧಾನಿ ಜಸ್ಟಿನ್‌ ಟ್ರುಡೊ ಅವರ ನೇತೃತ್ವದ ‘ಲಿಬರಲ್‌ ಪಾರ್ಟಿ ಆಫ್‌ ಕೆನಡಾ’ದ ಭಾರತ ಮೂಲದ ಸಂಸದ ಚಂದ್ರ ಆರ್ಯ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

‘ಕೆನಡಾದಲ್ಲಿ ನೆಲೆಸಿರುವ ಭಾರತೀಯ ಹಿಂದೂಗಳು ಸ್ವದೇಶಕ್ಕೆ ಮರಳಿ’ ಎಂದು ಖಾಲಿಸ್ತಾನಿ ಸಂಘಟನೆ ‘ದಿ ಸಿಖ್‌ ಫಾರ್‌ ಜಸ್ಟೀಸ್‌’ (ಎಸ್‌ಎಫ್‌ಜೆ) ಬಹಿರಂಗವಾಗಿ ಬೆದರಿಕೆ ಒಡ್ಡಿದ ಬಳಿಕ ಕರ್ನಾಟಕ ಮೂಲದವರಾದ ಚಂದ್ರ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ. 

ADVERTISEMENT

ಭಾರತ– ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ತೀವ್ರವಾಗುತ್ತಿರುವ ನಡುವೆಯೇ, ಕೆನಡಾದಲ್ಲಿ ಭಯೋತ್ಪಾದನೆಯನ್ನು ವೈಭವೀಕರಿಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಅವರು, ‘ಎಸ್‌ಎಫ್‌ಜೆ ಬಹಿರಂಗ ಹೇಳಿಕೆ ನೀಡಿದ ಬಳಿಕ ಆತಂಕಗೊಂಡಿರುವುದಾಗಿ ಕೆನಡಾದಲ್ಲಿರುವ ಹಿಂದೂ ಸಮುದಾಯದ ಹಲವರು ನನಗೆ ತಿಳಿಸಿದ್ದಾರೆ. ಹಿಂದೂಗಳಿಗೆ ಶಾಂತಿಯಿಂದ ಇರುವಂತೆ, ಆದರೆ ಎಚ್ಚರಿಕೆ ಕಾಯ್ದುಕೊಳ್ಳುವಂತೆ ಹೇಳಿದ್ದೇನೆ. ಹಿಂದೂ ವಿರೋಧಿ ಕೃತ್ಯಗಳು ಕಂಡುಬಂದರೆ ಸ್ಥಳೀಯ ಕಾನೂನು ಜಾರಿ ಸಂಸ್ಥಗಳಿಗೆ ಮಾಹಿತಿ ನೀಡಿ ಎಂದು ತಿಳಿಸಿದ್ದೇನೆ’ ಎಂದು ‘ಎಕ್ಸ್‌’ ವೇದಿಕೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಹಿಂದೂ ಮತ್ತು ಸಿಖ್‌ ಸಮುದಾಯದ ಮಧ್ಯೆ ಬಿರುಕು ಮೂಡಿಸುವ ಸಲುವಾಗಿ ಖಾಲಿಸ್ತಾನ ಪರ ಹೋರಾಟದ ನಾಯಕ ಗುರುಪತ್ವಂತ್‌ ಸಿಂಗ್‌ ಪನ್ನುನ್‌ (ನಿಜ್ಜರ್‌ ಪರ ವಕೀಲ) ಪ್ರಚೋದನೆ ನೀಡುತ್ತಿದ್ದಾನೆ ಎಂದಿದ್ದಾರೆ.

‘ಕೆನಡಾದಲ್ಲಿರುವ ಸಿಖ್‌ ಸಮುದಾಯದ ಬಹುತೇಕರು ಖಾಲಿಸ್ತಾನ ಪರ ಹೋರಾಟವನ್ನು ಬೆಂಬಲಿಸುವುದಿಲ್ಲ. ಹಲವಾರು ಕಾರಣಗಳಿಂದಾಗಿ ಇಲ್ಲಿಯ ಸಿಕ್ಖರು ಖಾಲಿಸ್ತಾನಿಗಳ ವಿರುದ್ಧ ಸಾರ್ವಜನಿಕವಾಗಿ ಮಾತನಾಡುವುದಿಲ್ಲ. ಆದರೆ ಅವರು ಇಲ್ಲಿಯ ಹಿಂದೂ ಸಮುದಾಯದ ಜೊತೆ ನಿಕಟವಾದ ಬಂಧ ಹೊಂದಿದ್ದಾರೆ. ಇಲ್ಲಿಯ ಹಿಂದೂಗಳು ಮತ್ತು ಸಿಕ್ಖರು ಕೌಟುಂಬಿಕ ಸಂಬಂಧ ಬೆಳೆಸಿದ್ದಾರೆ. ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಬೆಸೆದುಕೊಂಡಿದ್ದಾರೆ’ ಎಂದಿದ್ದಾರೆ.

‘ಕೆನಡಾ ಉನ್ನತ ಮೌಲ್ಯಗಳನ್ನು ಹೊಂದಿದೆ ಮತ್ತು ಕಾನೂನನ್ನು ಎತ್ತಿಹಿಡಿಯುತ್ತದೆ. ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ದ್ವೇಷಾಪರಾಧ ನಡೆಸುವುದನ್ನು ಹೇಗೆ ಅನುವು ಮಾಡಲಾಗುತ್ತಿದೆ’ ಎಂದು ಚಂದ್ರ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

‘ಈ ಸಂದರ್ಭದಲ್ಲಿ ನಾವೆಲ್ಲ ಒಟ್ಟಾಗಿ ಇರೋಣ ಮತ್ತು ನ್ಯಾಯಾಂಗ ವ್ಯವಸ್ಥೆಗೆ ಕಾರ್ಯನಿರ್ವಹಿಸಲು ಬಿಡೋಣ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.