ADVERTISEMENT

ಸಮುದ್ರದಲ್ಲಿ ಪತನವಾದ ಇಂಡೊನೇಷ್ಯಾ ವಿಮಾನದಿಂದ ಹೊಮ್ಮುತ್ತಿರುವ ಸಂಕೇತಗಳು ಪತ್ತೆ

ಏಜೆನ್ಸೀಸ್
Published 10 ಜನವರಿ 2021, 5:12 IST
Last Updated 10 ಜನವರಿ 2021, 5:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಜಕಾರ್ತ: ಇಂಡೊನೇಷ್ಯಾ ರಾಜಧಾನಿ ಜಕಾರ್ತ ಬಳಿಯ ಜಾವಾ ಸಮುದ್ರದಲ್ಲಿ ಪತನಗೊಂಡಿದ್ದ ವಿಮಾನದ 'ಫ್ಲೈಟ್‌ ರೆಕಾರ್ಡರ್' ಸಂಕೇತಗಳನ್ನು ಭಾನುವಾರ ಪತ್ತೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಕಾರ್ತದಿಂದ ಹೊರಟಿದ್ದ ಶ್ರೀವಿಜಯ ಏರ್‌ ಏರ್‌ಲೈನ್‌ ಕಂಪನಿಯ ವಿಮಾನವೊಂದು ಟೇಕ್‌ಆಫ್‌ ಆದ ಕೆಲವೇ ನಿಮಿಷಗಳಲ್ಲಿ ಸಮುದ್ರದಲ್ಲಿ ಪತನವಾಗಿತ್ತು. ವಿಮಾನದಲ್ಲಿ 50 ಪ್ರಯಾಣಿಕರು ಹಾಗೂ 12 ಸಿಬ್ಬಂದಿ ಇದ್ದರು.

'ನಾವು ಎರಡು ರೀತಿಯ ಸಂಕೇತಗಳನ್ನು ಪತ್ತೆ ಮಾಡಿದ್ದೇವೆ. ಇದು ಕಪ್ಪು ಪೆಟ್ಟಿಗೆಯಿಂದ ಬಂದಿರುವ ಸಂಕೇತವೇ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ' ಎಂದು ಇಂಡೊನೇಷ್ಯಾ ರಾಷ್ಟ್ರೀಯ ರಕ್ಷಣಾ ಕಾರ್ಯಾಚರಣೆ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

ADVERTISEMENT

ವಿಮಾನದಲ್ಲಿ ಕಾಕ್‌ಪಿಟ್‌ ವಾಯ್ಸ್‌ ರೆಕಾರ್ಡರ್‌ (ಪೈಲಟ್‌ ಕೋಣೆಯ ಧ್ವನಿಮುದ್ರಕ) ಮತ್ತು ಫ್ಲೈಟ್‌ ಡಾಟಾ ರೆಕಾರ್ಡರ್‌ (ವಿಮಾನ ದತ್ತಾಂಶ ದಾಖಲು ಸಾಧನ) ಎಂಬ ಮಾಹಿತಿ­ಗಳನ್ನು ದಾಖಲಿಸುವ ಎರಡು ಸಲಕರಣೆ­ಗಳಿರುತ್ತವೆ. ಇವೆರಡನ್ನೂ ಸೇರಿಸಿ ‘ಕಪ್ಪು ಪೆಟ್ಟಿಗೆ’ ಎಂದು ಕರೆಯಲಾಗುತ್ತಿದೆ

ಕಾಕ್‌ಪಿಟ್‌ ವಾಯ್ಸ್‌ ರೆಕಾರ್ಡರ್‌ ವಿಮಾನದ ಚಾಲನಾ ಕೋಣೆ­ಯ­ಲ್ಲಿರುತ್ತದೆ. ಪೈಲಟ್‌ಗಳು ಸೇರಿದಂತೆ ವಿಮಾನದ ಸಿಬ್ಬಂದಿಯ ಮಾತುಗಳನ್ನು ಧ್ವನಿಮುದ್ರಿಸುವುದು ಇದರ ಕೆಲಸ. ಕಾಕ್‌ಪಿಟ್‌ನಲ್ಲಿ ಉಂಟಾಗುವ ಎಲ್ಲಾ ಶಬ್ದವನ್ನು ಇದು ದಾಖಲಿಸುತ್ತದೆ. ಕಾಕ್‌ಪಿಟ್‌ ವಾಯ್ಸ್‌ ರೆಕಾರ್ಡರ್‌­ಗಿಂತಲೂ ಮುಖ್ಯವಾದ ಸಾಧನ ಫ್ಲೈಟ್‌ ಡಾಟಾ ರೆಕಾರ್ಡರ್‌. ವಿಮಾನ ಕಾರ್ಯ­ನಿರ್ವಹಿಸುತ್ತಿರುವ ಸಂದರ್ಭ­ದಲ್ಲಿ ಅದರ ವೇಗ, ಎತ್ತರ, ಸಂಚರಿಸು­ತ್ತಿದ್ದ ದಿಕ್ಕು ಸೇರಿದಂತೆ ಅತಿ ಸೂಕ್ಷ್ಮ ಮಾಹಿತಿ­ಗಳನ್ನು ಈ ಸಲಕರಣೆ ತನ್ನ ಒಡಲಾಳದಲ್ಲಿ ದಾಖಲಿಸಿಕೊಳ್ಳುತ್ತಿರುತ್ತದೆ. ಗರಿಷ್ಠ 25 ಗಂಟೆಗಳಷ್ಟು ಅವಧಿಯ ಹಾರಾಟದ ಮಾಹಿತಿಗಳು ಇದರಲ್ಲಿ ದಾಖಲಾಗಿ­ರುತ್ತದೆ.

ಜಾವಾ ಸಮುದ್ರದಲ್ಲಿ ಮೃತದೇಹ, ಬಟ್ಟೆ ಪತ್ತೆ

ಇಂಡೊನೇಷ್ಯಾ ರಾಜಧಾನಿ ಜಕಾರ್ತದ ಬಳಿಯ ಜಾವಾ ಸಮುದ್ರದಲ್ಲಿ ಪತನಗೊಂಡಿದ್ದ ವಿಮಾನದ ಅವಶೇಷಗಳನ್ನು ಹುಡುಕುತ್ತಿರುವ ರಕ್ಷಣಾ ಸಿಬ್ಬಂದಿಗೆ ಮನುಷ್ಯರ ದೇಹದ ಭಾಗಗಳು, ಬಟ್ಟೆ ತುಂಡುಗಳು ಮತ್ತು ಲೋಹದ ತುಣುಕುಗಳು ಭಾನುವಾರ ಬೆಳಗ್ಗೆ ದೊರೆತಿವೆ.

ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಇಂಡೊನೇಷ್ಯಾ ರಾಷ್ಟ್ರೀಯ ರಕ್ಷಣಾ ಸಂಸ್ಥೆಯು, 'ಜಾವಾ ಸಮುದ್ರದಲ್ಲಿ ದೇಹದ ಭಾಗಗಳು, ಬಟ್ಟೆ ತುಂಡುಗಳು ಮತ್ತು ಲೋಹದ ತುಣುಕುಗಳು ದೊರೆತಿವೆ. ಈ ತುಣುಕುಗಳು ಲಂಕಾಂಗ್ ದ್ವೀಪ ಮತ್ತು ಲಕಿ ದ್ವೀಪದ ನಡುವೆ ಪತ್ತೆಯಾಗಿವೆ' ಎಂದು ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.