ADVERTISEMENT

ಜ್ವಾಲಾಮುಖಿ ಸ್ಫೋಟ: 10,000 ಜನರ ಶಾಶ್ವತ ಸ್ಥಳಾಂತರಕ್ಕೆ ಇಂಡೋನೇಷ್ಯಾ ಕ್ರಮ

ರಾಯಿಟರ್ಸ್
Published 3 ಮೇ 2024, 12:25 IST
Last Updated 3 ಮೇ 2024, 12:25 IST
<div class="paragraphs"><p>ರುವಾಂಗ್&nbsp;ಪರ್ವತದಲ್ಲಿ ಪರ್ವತದಲ್ಲಿ ಜ್ವಾಲಾಮುಖಿ ಬೂದಿ ಹಾರುತ್ತಿರುವುದು</p></div>

ರುವಾಂಗ್ ಪರ್ವತದಲ್ಲಿ ಪರ್ವತದಲ್ಲಿ ಜ್ವಾಲಾಮುಖಿ ಬೂದಿ ಹಾರುತ್ತಿರುವುದು

   

ರಾಯಿಟರ್ಸ್ ಚಿತ್ರ

ಜಕಾರ್ತ (ಇಂಡೋನೇಷ್ಯಾ): ರುವಾಂಗ್ ಪರ್ವತದಲ್ಲಿ ನಿರಂತರವಾಗಿ ಜ್ವಾಲಾಮುಖಿ ಸ್ಫೋಟಗೊಳ್ಳುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಇಂಡೋನೇಷ್ಯಾ ಸರ್ಕಾರ, 10,000 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಶಾಶ್ವತವಾಗಿ ಸ್ಥಳಾಂತರಿಸಲು ಮುಂದಾಗಿದೆ.

ADVERTISEMENT

ಉತ್ತರ ಸುಲಾವೆಸಿ ಪ್ರಾಂತ್ಯಕ್ಕೆ ಸೇರಿದ ರುವಾಂಗ್ ದ್ವೀಪದಲ್ಲಿ ಸುಮಾರು 9,800 ಜನರು ನೆಲೆಸಿದ್ದಾರೆ. ಆದರೆ, ಇಲ್ಲಿನ ಪರ್ತತದಲ್ಲಿ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಲಾವಾ ಉಕ್ಕುತ್ತಿದ್ದು, ಬೂದಿ ಆಗಸದಲ್ಲಿ ಕಿಲೋಮೀಟರ್‌ವರೆಗೆ ಹಾರುತ್ತಿದೆ. ಹೀಗಾಗಿ, ಜನರನ್ನು ಸ್ಥಳಾಂತರಿಸುವಂತಾಗಿದೆ.

ಜ್ವಾಲಾಮುಖಿ ಸ್ಫೋಟ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದಿರುವ ಅಧಿಕಾರಿಗಳು, ಮನಡೊ ನಗರದಲ್ಲಿರುವ ಪ್ರಾಂತೀಯ ವಿಮಾನ ನಿಲ್ದಾಣವನ್ನು ಬಂದ್‌ ಮಾಡಿಸಿದ್ದಾರೆ. ಜೊತೆಗೆ, ಪರ್ವತದ ಒಂದು ಭಾಗ ಸಮುದ್ರಕ್ಕೆ ಕುಸಿದರೆ, ಸುನಾಮಿ ಪರಿಸ್ಥಿತಿ ಎದುರಾಗಬಹುದು ಎಂದೂ ಎಚ್ಚರಿಸಿದ್ದಾರೆ.

ಜ್ವಾಲಾಮುಖಿ ಪರಿಸ್ಥಿತಿ ಕುರಿತು ನಡೆದ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿರುವ ಮಾನವ ಅಭಿವೃದ್ಧಿ ಇಲಾಖೆ ಸಚಿವ ಮುಹಬ್ಜಿರ್‌ ಎಫ್ಫೆಂಡಿ, 'ಜನರ ಸ್ಥಳಾಂತರಕ್ಕೆ ಅನುಕೂಲವಾಗುವಂತೆ ನೊಲಾಂಗ್‌ ಮೊಂಗೋನ್‌ಡೌ ಪ್ರದೇಶದಲ್ಲಿ ನೂರಾರು ಸರಳ, ಶಾಶ್ವತ ಮನೆಗಳನ್ನು ನಿರ್ಮಿಸಲಾಗುತ್ತಿದೆ' ಎಂದು ಮಾಹಿತಿ ನೀಡಿದ್ದಾರೆ.

'ಅಧ್ಯಕ್ಷ ಜೊಕೊ ವಿಡೊಡೊ ಅವರ ಆದೇಶದ ಮೇರೆಗೆ, ವಿಪತ್ತು ಮಾನದಂಡಗಳ ಅನುಸಾರ ಮನೆಗಳನ್ನು ನಿರ್ಮಿಸಲು ಮುಂದಾಗಿದ್ದೇವೆ' ಎಂದಿದ್ದಾರೆ. ವಸತಿ ಪ್ರದೇಶವು ರುವಾಂಗ್ ಪರ್ವತದಿಂದ ಸುಮಾರು 200 ಕಿ.ಮೀ ದೂರದಲ್ಲಿದೆ ಎಂದೂ ಹೇಳಿದ್ದಾರೆ.

ರುವಾಂಗ್ ಪರ್ವತದಲ್ಲಿ ಕಳೆದ ತಿಂಗಳು ಜ್ವಾಲಾಮುಖಿ ಸ್ಫೋಟ ಆರಂಭವಾಗಿತ್ತು. ಆಳ ಸಮುದ್ರದಲ್ಲಿ ಹಾಗೂ ಭೂಗರ್ಭದಲ್ಲಿನ ಕಂಪನದಿಂದಾಗಿ ಸ್ಫೋಟ ತೀವ್ರಗೊಳ್ಳುತ್ತಿದೆ ಎಂದು ತಜ್ಞರು ಅಂದಾಜಿಸಿದ್ದರು.

ಮಂಗಳವಾರ (ಮೇ 2ರಂದು) ಮತ್ತೆ ಜ್ವಾಲಾಮುಖಿ ಸ್ಫೋಟಗೊಂಡು, ಹಲವು ಮನೆಗಳಿಗೆ ಹಾನಿಯಾಗಿತ್ತು. ಸ್ಫೋಟದ ಪರಿಣಾಮ ಮತ್ತಷ್ಟು ಹೆಚ್ಚಾದ ಕಾರಣ, ಆರಂಭದಲ್ಲಿ ಥುಲಾಂಡಾಂಗ್‌ನಲ್ಲಿ (ಪಕ್ಕದ ದ್ವೀಪ) ಆಶ್ರಯ ಪಡೆದಿದ್ದ ಸಂತ್ರಸ್ತರನ್ನು ಪ್ರಾಂತೀಯ ರಾಜಧಾನಿ ಮನಡೊದಲ್ಲಿರುವ ನಿರಾಶ್ರಿತರ ಶಿಬಿರಕ್ಕೆ ಸ್ಥಳಾಂತರಿಸುವಂತಾಯಿತು.

ಥುಲಾಂಡಾಂಗ್‌ನಲ್ಲಿನ ರಸ್ತೆಗಳು, ಕಟ್ಟಡಗಳ ಮೇಲೆ ಜ್ವಾಲಾಮುಖಿಯ ಬೂದಿ ದಟ್ಟವಾಗಿ ಆವರಿಸಿದೆ. ಹಲವು ಮನೆಗಳ ಮೇಲ್ಛಾವಣಿಗಳು ಕುಸಿದಿವೆ.

ಶುಕ್ರವಾರ ಹೊಸದಾಗಿ ಜ್ವಾಲಾಮುಖಿ ಸ್ಫೋಟವಾಗಿಲ್ಲವಾದರೂ, ಈಗಾಗಲೇ ಸಂಭವಿಸಿರುವ ಸ್ಫೋಟದಿಂದಾಗಿ ಭಾರಿ ಪ್ರಮಾಣದ ಬೂದಿ ಬಿದ್ದಿದೆ. ಇದರಿಂದ ಮನಡೊದ ಸ್ಯಾಮ್‌ ರಟುಲಂಗಿ ವಿಮಾನ ನಿಲ್ದಾಣದಲ್ಲಿ ಈವರೆಗೆ ಸಂಚಾರ ಆರಂಭವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.