ADVERTISEMENT

ಇಂಡೊನೇಷ್ಯಾ ಸುನಾಮಿ ಸಾವಿನ ಸಂಖ್ಯೆ1238ಕ್ಕೆ ಏರಿಕೆ: ಆಹಾರ ನೀರಿಗೆ ಹಾಹಾಕಾರ

ಏಜೆನ್ಸೀಸ್
Published 2 ಅಕ್ಟೋಬರ್ 2018, 10:42 IST
Last Updated 2 ಅಕ್ಟೋಬರ್ 2018, 10:42 IST
   

ಪಲು:ಇಂಡೊನೇಷ್ಯಾದ ಸುಲಾವೆಸಿ ದ್ವೀಪದಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮಿಯಿಂದ ಸಾವಿಗೀಡಾದವರ ಸಂಖ್ಯೆ 1238ಕ್ಕೇರಿದ್ದು ಇಲ್ಲಿನ ನಿವಾಸಿಗಳು ಕಳೆದ ನಾಲ್ಕು ದಿನಗಳಿಂದ ಆಹಾರ, ನೀರು ಇಲ್ಲದೆ ಪರಿತಪಿಸುತ್ತಿದ್ದಾರೆ.

ಮಂಗಳವಾರಕ್ಕೆ ವೃತಪಟ್ಟವರ ಸಂಖ್ಯೆ 1238ಕ್ಕೇರಿದೆ , ಅವಶೇಷಗಳ ಅಡಿಯಲ್ಲಿ ಸಿಲುಕಿರುವವರ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆಸಲಾಗಿದ್ದು ಸಾವಿನ ಸಂಖ್ಯೆ ಇನ್ನು ಹೆಚ್ಚುವ ಸಾಧ್ಯತೆಗಳಿವೆ ಎಂದುಇಂಡೊನೇಷ್ಯಾ ಉಪಾಧ್ಯಕ್ಷ ಜುಸೂಫ್‌ ಕಲ್ಲಾ ಹೇಳಿದ್ದಾರೆ.

ಅಪಾಯದಲ್ಲಿ ಸಿಲುಕಿರುವ ಜನರನ್ನುಸುರಕ್ಷಿತ ಸ್ಥಳಕ್ಕೆ ಕಳುಹಿಸಲು ವಿಫತ್ತು ನಿರ್ವಹಣಾ ತಂಡದ ಸದಸ್ಯರು ಹರಸಾಹಸ ಮಾಡುತ್ತಿದ್ದಾರೆ ಎಂದು ಜುಸೂಫ್‌ ಕಲ್ಲಾ ತಿಳಿಸಿದ್ದಾರೆ.

ADVERTISEMENT

ಪಲು ಮತ್ತು ಸುಲಾವೆಸಿಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಜನರು ಪೆಟ್ರೋಲ್ ಮತ್ತು ಆಹಾರಕ್ಕಾಗಿ ಕಿ.ಮೀಟರ್‌ಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಮಕ್ಕಳ ಬೀದಿಗಳಲ್ಲಿ ಬಿಕ್ಷೆ ಬೇಡುತ್ತಿದ್ದಾರೆ. ಪಲು ವಿಮಾನ ನಿಲ್ದಾಣದಲ್ಲಿ 3 ಸಾವಿರ ಜನರು ಆಶ್ರಯ ಪಡೆದಿದ್ದಾರೆ.

ಕಳೆದ ಮೂರು ದಿನಗಳಿಂದ ನಾನು ಊಟ ಮಾಡಿಲ್ಲ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಈ ಪ್ರದೇಶಗಳ ಬಹುತೇಕ ಜನರು ಎರಡು ಮೂರು ದಿನಗಳಿಂದ ಆಹಾರಕ್ಕೆ ಪರದಾಡುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿಮಾಡಿವೆ. ಜನವಸತಿ ಪ್ರದೇಶಗಳ ಅವಶೇಷಗಳ ಅಡಿಯಲ್ಲಿ ಜನರು ಸಿಲುಕಿರುವ ಶಂಕೆ ಇದೆ. ಬದುಕುಳಿದವರ ರಕ್ಷಣೆಗಾಗಿ ತ್ವರಿತಗತಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ವಿಶ್ವಸಂಸ್ಥೆಯ ರಕ್ಷಣಾ ಪಡೆಯು ಕಾರ್ಯಾಚರಣೆಯಲ್ಲಿ ತೊಡಗಿದೆ.

ಸುನಾಮಿಗೆ ಬಲಿಯಾದವರ ಸಂಖ್ಯೆ ಹೆಚ್ಚುತ್ತಲೇ ಇದ್ದು,ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ.

ಹಾನಿಗೊಳಗಾದ ಸ್ಥಳಕ್ಕೆ ಭಾನುವಾರ ಭೇಟಿ ನೀಡಿದ ಇಂಡೊನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ, ‘ನಿರಾಶ್ರಿತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸೇನಾ ಪಡೆಗಳು ಹಗಲಿರುಳು ಶ್ರಮಿಸಬೇಕು’ ಎಂದು ಹೇಳಿದ್ದಾರೆ.

ಸೇನಾ ವಿಮಾನದ ಮೂಲಕ ಸಂತ್ರಸ್ತರಿಗೆ ಆಹಾರ ಹಾಗೂ ಪರಿಹಾರ ಸಾಮಗ್ರಿಯನ್ನು ಸರಬರಾಜು ಮಾಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.