ದುಬೈ: ಕೇರಳದಲ್ಲಿ ಪ್ರವಾಹ ಸಂತ್ರಸ್ತರಿಗೆ ಆಹಾರ ಸಾಮಾಗ್ರಿಗಳನ್ನು ಕಳುಹಿಸಿ ಕೊಡುವ ಜತೆಗೆ ಸ್ಯಾನಿಟರಿ ಪ್ಯಾಡ್‍ಗಳನ್ನೂ ಕಳುಹಿಸಿಕೊಡಿ. ಈ ಕಷ್ಟದ ಸಮಯದಲ್ಲಿ ಮುಟ್ಟಾದ ಮಹಿಳೆಯರು ಪಡುವ ಕಷ್ಟ ಅಷ್ಟಿಷ್ಟಲ್ಲ. ಇದೊಂದು ನಾಚಿಕೆಯ ವಿಷಯ ಅಲ್ಲ. ಅವರಿಗೆ ನಾಚಿಕೆ ಆಗದಂತೆ ಸಹಾಯ ಮಾಡಬೇಕು ಎಂದು ಫೇಸ್‌ಬುಕ್‌ಪೋಸ್ಟೊಂದಕ್ಕೆ ಕಾಮೆಂಟ್ ಮಾಡಿದ್ದ ವ್ಯಕ್ತಿಗೆ ಸ್ವಲ್ಪ ಕಾಂಡೋಮ್ ಕೂಡಾ ಕಳಿಸಿದರೆ ಹೇಗೆ ಎಂದು ರಾಹುಲ್ ಸಿ.ಪಿ ಪೂತಲತ್ತು ಎಂಬ ವ್ಯಕ್ತಿ ಉತ್ತರಿಸಿದ್ದರು.
ರಾಹುಲ್ ಅವರ ಈ ಕಾಮೆಂಟ್‍ಗೆ ಫೇಸ್‌ಬುಕ್‌ನಲ್ಲಿ ಭಾರೀ ಆಕ್ಷೇಪ ವ್ಯಕ್ತವಾಗಿತ್ತು. ರಾಹುಲ್ ಕಾಮೆಂಟ್‍ನ ಸ್ಕ್ರೀನ್‍ಶಾಟ್ ಗಳನ್ನು ಶೇರ್ ಮಾಡಿದ ಮಲಯಾಳಿಗಳು ಆತನ ವಿರುದ್ಧ ಕಾಮೆಂಟ್ ದಾಳಿಗಳನ್ನು ನಡೆಸಿದ್ದರು.ಫೇಸ್‌ಬುಕ್‌ನಲ್ಲಿ ಈ ಪ್ರಕರಣವನ್ನು ನೆಟಿಜನ್‍ಗಳು ಕಾಂಡೋಮ್ ಥಿಯರಿ ಎಂದು ಲೇವಡಿ ಮಾಡುವ ಜತೆಗೆಇನ್ನು ಮುಂದೆ ಕಾಂಡೋಮ್ ಎನ್ನುವ ಬದಲು ರಾಹುಲ್ ಸಿ.ಪಿ ಎಂದರೆ ಸಾಕು ಎಂದುಕಾಮೆಂಟ್‍ಗಳನ್ನು ಮಾಡಲಾಗಿತ್ತು. ಪಟ್ಟು ಬಿಡದ ನೆಟಿಜನ್‍ಗಳು ಆತನನ್ನು ಕೆಲಸದಿಂದ ತೆಗೆದು ಹಾಕಿ ಎಂದು ಒತ್ತಾಯಿಸಿದ್ದರು.
ರಾಹುಲ್ ಅವರು ಒಮಾನ್‍ನಲ್ಲಿರುವ ಲುಲು ಗ್ರೂಪ್ ಇಂಟರ್ನ್ಯಾಷನಲ್‍ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದರು. ರಾಹುಲ್ ವಿರುದ್ಧ ಆಕ್ಷೇಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ದುಬೈ ಮೂಲದ ಸುದ್ದಿ ಮಾಧ್ಯಮ ಖಲೀಜ್ ಟೈಮ್ಸ್ ವರದಿ ಮಾಡಿದೆ.
ಇದಾದ ನಂತರ ರಾಹುಲ್ ಫೇಸ್‍ಬುಕ್ ವಿಡಿಯೊ ಮೂಲಕ ಕ್ಷಮೆಯಾಚಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಮಾತನಾಡಿದ ಲುಲು ಗ್ರೂಪ್‍ನ ಪ್ರಧಾನ ಸಂವಹನ ಅಧಿಕಾರಿ (ಸಿಸಿಒ).ವಿ. ನಂದಕುಮಾರ್,ರಾಹುಲ್ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ನಾವು ಸಮಾಜಕ್ಕೆ ಸ್ಪಷ್ಟ ಹಾಗೂ ದಿಟ್ಟ ನಿಲುವನ್ನು ತೋರಿಸಿದ್ದೇವೆ. ನಮ್ಮ ಸಂಸ್ಥೆ ಸದಾ ಮಾನವೀಯ ಮೌಲ್ಯಗಳಿಗೆ ಬೆಲೆ ನೀಡಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.