‘ಪಾಕಿಸ್ತಾನದ ಬಾಲಾಕೋಟ್ ಪ್ರಾಂತ್ಯದಲ್ಲಿ ಜೈಷ್ ಏ ಮೊಹಮದ್ ಉಗ್ರ ಸಂಘಟನೆಯು ತನ್ನ ನೆಲೆಯನ್ನು ವಿಸ್ತರಿಸಿಕೊಂಡಿದೆ. ತರಬೇತಿ ವ್ಯವಸ್ಥೆಯನ್ನು ಭದ್ರ ಪಡಿಸಿಕೊಂಡಿದೆ. ಅಲ್ಲದೆ, ತರಬೇತಿ ಶಿಬಿರದಲ್ಲಿ ಕನಿಷ್ಠ ಎರಡು ಹೊಸ ಕಟ್ಟಡಗಳನ್ನು ನಿರ್ಮಿಸಿಕೊಂಡಿದ’ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
‘ಬಾಳಕೋಟ್‌ನಲ್ಲಿ ಜೈಷ್ ಉಗ್ರರ ಕಾರ್ಯಚಟುವಟಿಕೆ ಮತ್ತೆ ಆರಂಭವಾಗಿದೆ’ ಎಂದು ಸೇನಾ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಅವರು ಕಳೆದ ಸೆಪ್ಟಂಬರ್‌ನಲ್ಲಿ ಹೇಳಿದ್ದರು. ಅದಕ್ಕೆ ಪೂರಕವಾದ ಮಾಹಿತಿಯನ್ನು ಗುಪ್ತಚರ ಇಲಾಖೆಯ ಹೆಸರು ಹೇಳಲಿಚ್ಚಿಸದ ಅಧಿಕಾರಿಗಳ ಮಾಹಿತಿ ಉಲ್ಲೇಖಿಸಿ ‘ಹಿಂದೂಸ್ಥಾನ್ ಟೈಮ್ಸ್’ ವರದಿ ಪ್ರಕಟಿಸಿದೆ.
‘ತಾಂತ್ರಿಕ ಮತ್ತು ಬೌದ್ಧಿಕ ವಿವೇಚನೆಗೆ ಬಂದ ಮಾಹಿತಿಯ ಪ್ರಕಾರ ಬಾಳಾಕೋಟ್‌ನಲ್ಲಿ ಉಗ್ರರ ಕಾರ್ಯಚಟುವಟಿಕೆ ಮತ್ತೆ ಆರಂಭವಾಗಿದೆ. ಅಲ್ಲಿ ಮತ್ತೆರಡು ಹೊಸ ಕಟ್ಟಡಗಳು ನಿರ್ಮಾಣವಾಗಿವೆ’ ಎಂದು ಗುಪ್ತಚರ ಇಲಾಖೆ ಆಧಿಕಾರಿಗಳು ಮಾಹಿತಿ ಬಹಿರಂಗಪಡಿಸಿದ್ದಾರೆ.
‘ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿ ರದ್ದಾದ ನಂತರವಂತೂ ಪಾಕಿಸ್ತಾನ ಮತ್ತಷ್ಟು ಉಗ್ರರನ್ನು ಭಾರತದೊಳಗೆ ನುಸುಳಿಸಲು ಪ್ರಯತ್ನಿಸಿದೆ. ಕಣಿವೆ ರಾಜ್ಯದಲ್ಲಿ ಮಂಜು ಸುರಿಯುತ್ತಿದ್ದರೂ ಈ ಕ್ರಿಯೆ ನಿಂತಿಲ್ಲ. ಅವರೆಲ್ಲರೂ ಗಡಿ ರೇಖೆಯಿಂದ, ಅಂತಾರಾಷ್ಟ್ರೀಯ ಗಡಿಗೆ ಸ್ಥಳಾಂತರಗೊಂಡಿದ್ದಾರೆ. ಆ ಮೂಲಕ ಭಾರತ ಪ್ರವೇಶಿಸುತ್ತಿದ್ದಾರೆ’ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
2019ರ ಫೆ 14ರಂದು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ದಾಳಿ ನಡೆದ ನಂತರ ಭಾರತವು ಪಾಕಿಸ್ತಾನದಲ್ಲಿ ಕಾರ್ಯನಿರತವಾಗಿರುವ ಉಗ್ರರ ಅಡಗುದಾಣಗಳ ಕುರಿತು ಆ ದೇಶಕ್ಕೆ ದಾಖಲೆಗಳನ್ನು ನೀಡಿತ್ತು. ಅದರ ಪ್ರಕಾರ ಬಾಲಾಕೋಟ್‌ನಲ್ಲಿ 600 ಉಗ್ರರು ತಂಗಬಹುದಾದ ಆರು ಎಕರೆ ವಿಸ್ತೀರ್ಣದ ಉಗ್ರ ತರಬೇತಿ ಕೇಂದ್ರವಿರುವುದಾಗಿ ತಿಳಿಸಿತ್ತು. ಇದೇ ಜಾಗದ ಮೇಲೆ ಭಾರತೀಯ ವಾಯುಪಡೆ ದಾಳಿಯನ್ನೂ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.