ಒಟ್ಟಾವ: ಭಾರತವನ್ನೂ ಒಳಗೊಂಡಂತೆ ವಿವಿಧ ರಾಷ್ಟ್ರಗಳಿಂದ ಕೆನಡಾಗೆ ಬರುವ ವಿದ್ಯಾರ್ಥಿಗಳು, ಬರುವ ಸೆಪ್ಟೆಂಬರ್‌ನಿಂದ ವಾರದಲ್ಲಿ 24 ಗಂಟೆ ಮಾತ್ರ ಕೆಲಸ ಮಾಡಲು ಅರ್ಹರಾಗಿರುತ್ತಾರೆ.
‘ಕ್ಯಾಂಪಸ್ ಹೊರಗೆ ವಾರದಲ್ಲಿ 20 ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡುವ ಅವಕಾಶವನ್ನು ಕೆನಡಾದ ತಾತ್ಕಾಲಿಕ ನೀತಿಯೊಂದು ವಿದೇಶಿ ವಿದ್ಯಾರ್ಥಿಗಳಿಗೆ ಇತ್ತು. ಇದು ಏ. 30ಕ್ಕೆ ಕೊನೆಗೊಂಡಿದ್ದು, ಮುಂದುವರಿಯುತ್ತಿಲ್ಲ. ಇನ್ನುಮುಂದೆ ಕ್ಯಾಂಪಸ್‌ನಿಂದ ಹೊರಗೆ ಕೆಲಸ ಮಾಡಲು ವಾರಕ್ಕೆ 24 ಗಂಟೆಗಳ ಮಿತಿಯನ್ನು ನಿಗದಿಪಡಿಸಲಾಗಿದೆ’ ಎಂದು ವಲಸೆ, ನಿರಾಶ್ರಿತರು ಹಾಗೂ ಪೌರತ್ವ ಸಚಿವ ಮಾರ್ಕ್ ಮಿಲ್ಲರ್ ಸುದ್ದಿಗಾರರಿಗೆ ತಿಳಿಸಿದ್ಧಾರೆ.
‘ಕೋವಿಡ್–19 ಸೋಂಕು ವ್ಯಾಪಿಸಿದ್ದ ಸಂದರ್ಭದಲ್ಲಿ ದೇಶದಲ್ಲಿ ಉಂಟಾದ ಕಾರ್ಮಿಕರ ಕೊರತೆ ನೀಗಿಸಲು, ವಾರದಲ್ಲಿ 20ಕ್ಕೂ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವ ಅವಕಾಶವನ್ನು ಕೆನಡಾದ ಪ್ರಧಾನಿ ಜಸ್ಟಿನ ಟ್ರ್ಯೂಡ್ ಅವರು ವಿದೇಶಿ ವಿದ್ಯಾರ್ಥಿಗಳಿಗೆ ಕಲ್ಪಿಸಿದ್ದರು. ಕೆನಡಾದಲ್ಲಿ ಭಾರತದಿಂದ ತೆರಳಿದ ಬಹಳಷ್ಟು ವಿದ್ಯಾರ್ಥಿಗಳು ಇದ್ದಾರೆ. ಕೆನಡಿಯನ್ ಬ್ಯೂರೊ ಫಾರ್ ಇಂಟರ್‌ನ್ಯಾಷನಲ್ ಎಜ್ಯುಕೇಷನ್ ಸಂಸ್ಥೆಯು 2022ರ ಪ್ರಕಟಿಸಿದ ವರದಿಯ ಪ್ರಕಾರ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸುಮಾರು 3.19 ಲಕ್ಷ ಭಾರತೀಯ ವಿದ್ಯಾರ್ಥಿಗಳಿದ್ದಾರೆ. ಅಂತರರಾಷ್ಟ್ರೀಯ ಸಮುದಾಯವನ್ನು ಪರಿಗಣಿಸಿದರೆ, ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ದೊಡ್ಡದಿದೆ’ ಎಂದು ವರದಿ ಹೇಳಿದೆ.
‘ವಿದ್ಯಾಭ್ಯಾಸಕ್ಕಾಗಿ ಕೆನಡಾಗೆ ಬರುವವರು ಕಡ್ಡಾಯವಾಗಿ ಓದಬೇಕು. ಹೀಗಾಗಿ, ವಾರದಲ್ಲಿ 24 ಗಂಟೆಗಳಷ್ಟೇ ಕ್ಯಾಂಪಸ್‌ನಿಂದ ಹೊರಗೆ ದುಡಿಯಲು ಅವಕಾಶ ಕಲ್ಪಿಸಲಾಗಿದೆ. ಕ್ಯಾಂಪಸ್‌ನಿಂದ ಹೊರಗೆ ದುಡಿಯುವ ಅವಕಾಶ ಇರುವುದು, ತಾವು ಆಯ್ಕೆ ಮಾಡಿಕೊಳ್ಳುವ ವೃತ್ತಿಯಲ್ಲಿನ ಅನುಭವ ಪಡೆಯುವುದಕ್ಕೆ ಮಾತ್ರ. ಇದರೊಂದಿಗೆ ವಿದ್ಯಾರ್ಥಿಗಳಿಗೆ ಇರಬಹುದಾದ ಸಣ್ಣಪುಟ್ಟ ಖರ್ಚುಗಳಿಗೆ ಈ ದುಡಿಮೆ ನೆರವಾಗಲಿದೆ. ವಿದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ತಮ್ಮ ಗುರಿ ಸಾಧನೆಗೆ ಅಗತ್ಯವಿರುವ ಸಹಕಾರವನ್ನು ಕೆನಡಾ ಸರ್ಕಾರ ನೀಡಲಿದೆ. ಹೀಗಾಗಿ ಯಾವುದೇ ದೇಶದಿಂದ ಕೆನಡಾಗೆ ಬರುವ ವಿದ್ಯಾರ್ಥಿಗಳ ಪ್ರಥಮ ಆದ್ಯತೆ ಅಧ್ಯಯನ ಆಗಿರಬೇಕೇ ಹೊರತು, ಉದ್ಯೋಗವಲ್ಲ’ ಎಂದು ಮಿಲ್ಲರ್ ಹೇಳಿದ್ದಾರೆ.
ವಾರಕ್ಕೆ 28ಕ್ಕೂ ಹೆಚ್ಚು ಗಂಟೆ ದುಡಿದ ವಿದ್ಯಾರ್ಥಿಗಳ ಕಲಿಕಾ ಮಟ್ಟ ಕುಸಿದಿರುವುದನ್ನು ಅಮೆರಿಕ ಮತ್ತು ಕೆನಡಾದಲ್ಲಿ ಇತ್ತೀಚೆಗೆ ನಡೆದ ಅಧ್ಯಯವೊಂದು ದಾಖಲಿಸಿತ್ತು. ಇದು ವಿದ್ಯಾರ್ಥಿಗಳನ್ನು ಕಲಿಕೆಯಿಂದ ವಿಮುಖರನ್ನಾಗಿಸುವ ಅಪಾಯವೂ ಇದೆ ಎಂದು ವರದಿ ಹೇಳಿತ್ತು.
ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಕಲಿಕೆಗೆ ಅವಕಾಶ ಕಲ್ಪಿಸುವ ದೇಶಗಳು, ಕ್ಯಾಂಪಸ್ ಹೊರಗೆ ದುಡಿಯಲು ಸಮಯ ನಿಗದಿ ಮಾಡಿರುವ ಉದಾಹರಣೆಗಳು ಇವೆ. ಆಸ್ಟ್ರೇಲಿಯಾದಲ್ಲಿ 2 ವಾರಕ್ಕೆ 48 ಗಂಟೆ ದುಡಿಯಲು ಅವಕಾಶ ಕಲ್ಪಿಸಿ ನೀತಿಯೊಂದನ್ನು ರೂಪಿಸಲಾಗಿದೆ.
ಕೆನಡಾದಲ್ಲಿ ವ್ಯಾಸಂಗಕ್ಕಾಗಿ ಬರುವ ವಿದ್ಯಾರ್ಥಿಗಳ ಜೀವನ ನಿರ್ವಹಣೆಗೆ ಅಗತ್ಯವಿರುವ ನಿರ್ದಿಷ್ಟ ಆರ್ಥಿಕ ವ್ಯವಸ್ಥೆಯನ್ನು ಅವರೇ ಮಾಡಿಕೊಳ್ಳಬೇಕು. ಅದಕ್ಕಾಗಿ ಉದ್ಯೋಗದ ಮೇಲೆ ಅವಲಂಬಿತರಾಗುವಂತಿಲ್ಲ ಎಂದು 2023ರ ಡಿಸೆಂಬರ್‌ನಲ್ಲಿ ಕೆನಡಾ ಸರ್ಕಾರ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.