ದುಬೈ: ‘ಕಳೆದ ನಾಲ್ಕೂವರೆ ವರ್ಷಗಳಲ್ಲಿ ಭಾರತದಲ್ಲಿ ಅಸಹಿಷ್ಣುತೆ ಮತ್ತು ಆಕ್ರೋಶವೇ ಹೆಚ್ಚಾಗಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಟುವಾಗಿ ಟೀಕಿಸಿದರು.
ಐಎಂಟಿ ದುಬೈ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಜತೆ ಶನಿವಾರ ಸಮಾಲೋಚನೆ ನಡೆಸಿದ ರಾಹುಲ್, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡರು.
‘ನಮ್ಮ ಸಂಸ್ಕೃತಿಯಲ್ಲೇ ಸಹಿಷ್ಣುತೆ ಅಡಗಿದೆ. ಇನ್ನೊಬ್ಬರ ಆತಂಕ, ನೋವು–ನಲಿವುಗಳನ್ನು ಆಲಿಸುವ ಗುಣಧರ್ಮ ನಮ್ಮಲ್ಲಿದೆ. ಆದರೆ, ಕಳೆದ ನಾಲ್ಕೂವರೆ ವರ್ಷಗಳಲ್ಲಿ ಭಾರತದಲ್ಲಿ ನಡೆದಿರುವ ಘಟನೆಗಳು ನೋವುಂಟು ಮಾಡುತ್ತವೆ. ಸಮುದಾಯಗಳ ವಿಭಜನೆ, ಅಸಹಿಷ್ಣುತೆ ಹಾಗೂ ಜನರಲ್ಲಿನ ಅಸಮಾಧಾನವನ್ನು ನೋಡಿದ್ದೇವೆ. ಅಧಿಕಾರದಲ್ಲಿರುವವರ ಮಾನಸಿಕ ಸ್ಥಿತಿಯಿಂದ ಇಂತಹ ಉಸಿರುಗಟ್ಟುವ ವಾತಾವರಣ ಸೃಷ್ಟಿಯಾಗಿದೆ’ ಎಂದು ಕಿಡಿಕಾರಿದರು.
’ನಾಯಕತ್ವ ಸಹಿಷ್ಣುತೆಯ ಮನೋಭಾವ ಹೊಂದಿದ್ದರೆ ಸಹಜವಾಗಿಯೇ ತಾಳ್ಮೆಯಿಂದ ಕರ್ತವ್ಯ ನಿರ್ವಹಿಸಿ ಸೌಹಾರ್ದಯುತ ವಾತಾವರಣ ಸೃಷ್ಟಿಸುತ್ತಾರೆ. ಹೀಗಾಗಿ, ಮತ್ತೆ ಸಹನಶೀಲ ವಾತಾವರಣವನ್ನು ಸೃಷ್ಟಿಸಬೇಕಾಗಿದೆ’ ಎಂದು ಅವರು ಹೇಳಿದರು.
*
ಪತ್ರಕರ್ತರನ್ನು ಹತ್ಯೆ ಮಾಡುವ ಭಾರತ ನಮಗೆ ಬೇಡ. ಕೇವಲ ಹೇಳಿಕೆ ನೀಡಿದ್ದಕ್ಕೆ ಥಳಿಸುವ ದೇಶವೂ ಬೇಡ. ನಮಗೆ ಬದಲಾವಣೆ ಬೇಕಾಗಿದೆ.
-ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.