ADVERTISEMENT

ದಾಳಿಗೆ ಇರಾನ್ ಬೆಲೆ ತೆರಲಿದೆ: ನೆತನ್ಯಾಹು

ಇಸ್ರೇಲ್‌ ಪ್ರತಿದಾಳಿ ನಡೆಸಿದಲ್ಲಿ ಇನ್ನೂ ದೊಡ್ಡ ದಾಳಿ ನಡೆಸುವೆವು: ಇರಾನ್

ಏಜೆನ್ಸೀಸ್
Published 2 ಅಕ್ಟೋಬರ್ 2024, 23:15 IST
Last Updated 2 ಅಕ್ಟೋಬರ್ 2024, 23:15 IST
<div class="paragraphs"><p>ಇಸ್ರೇಲ್ ಮೇಲೆ ಇರಾನ್ ದಾಳಿ</p></div>

ಇಸ್ರೇಲ್ ಮೇಲೆ ಇರಾನ್ ದಾಳಿ

   

(ರಾಯಿಟರ್ಸ್ ಚಿತ್ರ)

ಜೆರುಸಲೇಂ: ಇಸ್ರೇಲ್ ಮೇಲೆ ಇರಾನ್‌ ಸುರಿಸಿದ ಕ್ಷಿಪಣಿಗಳ ಮಳೆಗೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮಂಗಳವಾರ ಶಪಥ ಮಾಡಿದ್ದಾರೆ. ಇಸ್ರೇಲ್‌ ಕಡೆಯಿಂದ ಪ್ರತಿದಾಳಿ ನಡೆದಿದ್ದೇ ಆದಲ್ಲಿ, ಈಗ ನಡೆಸಿರುವುದಕ್ಕಿಂತ ಹೆಚ್ಚು ದೊಡ್ಡ ಪ್ರಮಾಣದ ದಾಳಿ ನಡೆಸುವುದಾಗಿ ಇರಾನ್‌ ಎಚ್ಚರಿಕೆ ನೀಡಿದೆ.

ADVERTISEMENT

‘ಇರಾನ್ ಬಹಳ ದೊಡ್ಡ ತಪ್ಪು ಮಾಡಿದೆ. ಅದಕ್ಕೆ ಅದು ಬೆಲೆ ತೆರಲಿದೆ’ ಎಂದು ನೆತನ್ಯಾಹು ಅವರು ಹೇಳಿದ್ದಾರೆ. ಕ್ಷಿಪಣಿ ದಾಳಿಯು ವಿಫಲವಾಗಿದೆ; ಗಾಜಾ, ಲೆಬನಾನ್ ಮತ್ತು ಇತರ ಕಡೆಗಳಲ್ಲಿ ಶತ್ರುಗಳು ಪಾಠ ಕಲಿತ ಬಗೆಯಲ್ಲೇ ಈ ದಾಳಿ ನಡೆಸಿದ್ದಕ್ಕೆ ಇರಾನ್‌ ಕೂಡ ಬಹಳ ಬೇಗನೆ ಪಾಠ ಕಲಿತುಕೊಳ್ಳಲಿದೆ ಎಂದು ನೆತನ್ಯಾಹು ಹೇಳಿದ್ದಾರೆ.

‘ನಮ್ಮ ಮೇಲೆ ಯಾರು ದಾಳಿ ನಡೆಸುತ್ತಾರೋ, ನಾವು ಅವರ ಮೇಲೆ ದಾಳಿ ನಡೆಸುತ್ತೇವೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ರಾತ್ರಿ ಇರಾನ್‌ ನಡೆಸಿದ ದಾಳಿಗೆ ಇಸ್ರೇಲ್‌ನಲ್ಲಿ ಪ್ರಾಣಹಾನಿ ಸಂಭವಿಸಿದ ವರದಿಗಳು ಇಲ್ಲ. ಬಹುತೇಕ ಕ್ಷಿಪಣಿಗಳನ್ನು ಆಗಸದಲ್ಲಿಯೇ ಹೊಡೆದುರುಳಿಸಲಾಯಿತು ಎಂದು ಇಸ್ರೇಲ್ ಹೇಳಿದೆ. ಆದರೆ, ಕೆಲವು ಕ್ಷಿಪಣಿಗಳು ತನ್ನ ವಾಯುನೆಲೆಯ ಮೇಲೆ ಬಿದ್ದಿವೆ ಎಂದು ತಿಳಿಸಿದೆ.

ಇಸ್ರೇಲ್‌ನ ರಕ್ಷಣೆಗೆ ನೆರವು ಒದಗಿಸಿರುವುದಾಗಿ ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಇಸ್ರೇಲ್‌ನ ರಕ್ಷಣೆಗೆ ತಾನು ಕೂಡ ಸಹಾಯಹಸ್ತ ಚಾಚಿದ್ದಾಗಿ ಬ್ರಿಟನ್ ತಿಳಿಸಿದೆ. ತಾನು ಹಾರಿಸಿದ ಕ್ಷಿಪಣಿಗಳಲ್ಲಿ ಹೆಚ್ಚಿನವು ಗುರಿ ತಲುಪಿವೆ ಎಂದು ಇರಾನ್ ಹೇಳಿದೆ. ಏಪ್ರಿಲ್‌ ನಂತರ ಇಸ್ರೇಲ್ ಮೇಲೆ ಇರಾನ್ ನಡೆಸಿದ ಎರಡನೆಯ ದಾಳಿ ಇದು. 

ಹಮಾಸ್ ಮತ್ತು ಹಿಜ್ಬುಲ್ಲಾ ಸಂಘಟನೆಗಳ ಪ್ರಮುಖರ ಹತ್ಯೆಯಲ್ಲಿ ಬಳಕೆಯಾದ ವೈಮಾನಿಕ ನೆಲೆ, ರೇಡಾರ್ ನೆಲೆ, ಭದ್ರತಾ ವ್ಯವಸ್ಥೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆದಿದೆ ಎಂದು ಇರಾನ್ ತಿಳಿಸಿದೆ. ಇರಾನ್‌ ದಾಳಿ ಸಂದರ್ಭದಲ್ಲಿ ಭೀತರಾಗಿದ್ದ ಇಸ್ರೇಲಿಯರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದರು.

ಹಿಜ್ಬುಲ್ಲಾ ಬಂಡುಕೋರ ಸಂಘಟನೆಯ ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆ ಹಾಗೂ ಟೆಹ್ರಾನ್‌ನಲ್ಲಿ ಇದ್ದ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆ ಅವರ ಹತ್ಯೆಗೆ ಪ್ರತಿಯಾಗಿ ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ ನಡೆದಿದೆ ಎಂದು ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಹೇಳಿದೆ.

ಇಸ್ರೇಲ್ ಮೇಲೆ ನಡೆದ ಕ್ಷಿಪಣಿ ದಾಳಿಯನ್ನು ಇರಾನ್‌ ಕೆಲವು ನಗರಗಳಲ್ಲಿನ ಜನ ಸಂಭ್ರಮಿಸಿದ ದೃಶ್ಯಗಳನ್ನು ಇರಾನ್‌ನ ಸರ್ಕಾರಿ ಸ್ವಾಮ್ಯದ ಟಿ.ವಿ. ವಾಹಿನಿ ಪ್ರಸಾರ ಮಾಡಿದೆ.

ಇಸ್ರೇಲ್‌ಗೆ ಪೂರ್ಣ ನೆರವು ಒದಗಿಸುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ದಾಳಿಗೆ ಸೂಕ್ತವಾದ ಪ್ರತಿಕ್ರಿಯೆ ನೀಡುವ ವಿಚಾರದಲ್ಲಿ ಮಿತ್ರರ ಜೊತೆ ಸಮಾಲೋಚನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಲೆಬನಾನ್‌ ಮೇಲೆ ದಾಳಿ: 

ಇಸ್ರೇಲ್‌ ಪಡೆಗಳು ಬುಧವಾರ ಬೆಳಿಗ್ಗೆ ಲೆಬನಾನ್‌ನ ದಕ್ಷಿಣ ಬೈರೂತ್‌ ಮೇಲೆ ದಾಳಿ ನಡೆಸಿವೆ. ಇಸ್ರೇಲ್ ಸೈನಿಕರು ಹಾಗೂ ಹಿಜ್ಬುಲ್ಲಾ ಬಂಡುಕೋರರ ನಡುವೆ ಭೀಕರ ಕದನ ನಡೆದಿದೆ. ಇಸ್ರೇಲ್‌ ಎಂಟು ಯೋಧರನ್ನು ಕಳೆದುಕೊಂಡಿದೆ.

ಇರಾನ್ ಹಾರಿಸಿದ ಕ್ಷಿಪಣಿಯ ತುಣುಕೊಂದು ಬಿದ್ದು ಪಶ್ಚಿಮ ದಂಡೆಯಲ್ಲಿ ಪ್ಯಾಲೆಸ್ಟೀನ್ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ.

ಸರಿಸುಮಾರು ಒಂದು ವರ್ಷದಿಂದ ನಡೆಯುತ್ತಿರುವ ಯುದ್ಧದ ವಿಚಾರವಾಗಿ ಇಸ್ರೇಲ್‌ನ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನನಗೆ ಬಹಳ ಅಸಮಾಧಾನ ಆಗಿದೆ. ಯುದ್ಧ ಎತ್ತ ಸಾಗುತ್ತಿದೆ ಎಂಬುದು ನನಗೆ ಗೊತ್ತಾಗುತ್ತಿದೆ. ಅದು ನನಗೆ ಸಮಾಧಾನ ತರುತ್ತಿಲ್ಲ’ ಎಂದು ಟೆಲ್ ಅವಿವ್ ನಿವಾಸಿ ಲಿರೊನ್ ಯೊರಿ ಹೇಳಿದ್ದಾರೆ.

ಬೈರೂತ್‌ನ ಕೇಂದ್ರ ಭಾಗದಲ್ಲಿ ಕೂಡ ಜನ ಭೀತರಾಗಿದ್ದಾರೆ. ಲೆಬನಾನ್‌ನ ದಕ್ಷಿಣ ಭಾಗದಿಂದ ನಿರಾಶ್ರಿತರಾಗಿ ಬಂದಿರುವ ಯೂಸಫ್ ಅಮೀರ್ ಅವರು, ‘ಯುದ್ಧದಲ್ಲಿ ನನ್ನ ಮನೆಯನ್ನು, ಸಂಬಂಧಿಕರನ್ನು ಕಳೆದುಕೊಂಡಿದ್ದೇನೆ. ಆದರೆ ಇವೆಲ್ಲ ಲೆಬನಾನ್‌ಗಾಗಿ ಮಾಡಿರುವ ತ್ಯಾಗ’ ಎಂದು ಹೇಳಿದ್ದಾರೆ.

  • ದಕ್ಷಿಣ ಲೆಬನಾನ್‌ನ 24 ಗ್ರಾಮಗಳ ಜನರಿಗೆ ಮನೆಗಳನ್ನು ಖಾಲಿ ಮಾಡುವಂತೆ ಇಸ್ರೇಲ್ ಮಿಲಿಟರಿ ಸೂಚಿಸಿದೆ. ಭೂದಾಳಿ ಆರಂಭಿಸಿದ ನಂತರ ಮಿಲಿಟರಿಯು ಈ ಸೂಚನೆ ನೀಡಿದೆ.

  • ಗಾಜಾದಲ್ಲಿನ ಖಾನ್ ಯೂನಿಸ್ ನಗರದ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ 51 ಮಂದಿ ಹತರಾಗಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ಹೇಳಿದೆ.

ವಿಶ್ವಸಂಸ್ಥೆಯ ಮುಖ್ಯಸ್ಥರಿಗೆ ಪ್ರವೇಶವಿಲ್ಲ

ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರು ‘ಮಧ್ಯಪ್ರಾಚ್ಯದಲ್ಲಿ ವಿಸ್ತರಿಸುತ್ತಿರುವ ಸಂಘರ್ಷವು ಕೊನೆಗೊಳ್ಳಬೇಕು’ ಎಂದು ಹೇಳಿದ್ದಾರೆ. ಆದರೆ ಅವರು ಇರಾನ್‌ ದಾಳಿಯನ್ನು ಖಂಡಿಸಲಿಲ್ಲ. ಇದಕ್ಕೆ ಪ್ರತಿಕ್ರಿಯೆಯಾಗಿ ಇಸ್ರೇಲ್‌ ವಿದೇಶಾಂಗ ಸಚಿವ ಇಸ್ರೇಲ್ ಕಟ್ಜ್ ಅವರು ಗುಟೆರಸ್ ಅವರಿಗೆ ತಮ್ಮ ದೇಶಕ್ಕೆ ಪ್ರವೇಶ ಇಲ್ಲ ಅವರಿಗೆ ಇಸ್ರೇಲ್ ನೆಲದ ಮೇಲೆ ಕಾಲಿರಿಸಲು ಅರ್ಹತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಘರ್ಷ ವಿಸ್ತರಿಸುತ್ತಿರುವುದನ್ನು ಖಂಡಿಸುವ ಸಂದರ್ಭದಲ್ಲಿ ಇರಾನ್‌ ಹೆಸರು ಉಲ್ಲೇಖಿಸದೆ ಇದ್ದುದಕ್ಕಾಗಿ ಇಸ್ರೇಲ್‌ನಿಂದ ಟೀಕೆಗೆ ಗುರಿಯಾದ ಗುಟೆರಸ್ ಅವರು ನಂತರದಲ್ಲಿ ಕ್ಷಿಪಣಿ ದಾಳಿಯನ್ನು ಖಂಡಿಸಿದ್ದಾರೆ.

ಸಂಯಮಕ್ಕೆ ಭಾರತ ಕರೆ

ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟು ತೀವ್ರಗೊಂಡ ನಂತರ ನೀಡಿರುವ ಮೊದಲ ಪ್ರತಿಕ್ರಿಯೆಯಲ್ಲಿ ಭಾರತವು ಎಲ್ಲರೂ ಸಂಯಮ ಪ್ರದರ್ಶಿಸಬೇಕು ಎಂದು ಹೇಳಿದೆ. ಬಿಕ್ಕಟ್ಟು ಹೆಚ್ಚು ವ್ಯಾಪಕವಾದ ಪ್ರಾದೇಶಿಕ ಆಯಾಮವನ್ನು ಪಡೆದುಕೊಳ್ಳಬಾರದು ಬಿಕ್ಕಟ್ಟನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದೆ.

ಇಸ್ರೇಲ್‌ನ 8 ಸೈನಿಕರು ಹತ
ಇಸ್ರೇಲ್‌ ಪಡೆಗಳು ಬುಧವಾರ ಬೆಳಿಗ್ಗೆ ಲೆಬನಾನ್‌ನ ದಕ್ಷಿಣ ಬೈರೂತ್‌ ಮೇಲೆ ದಾಳಿ ನಡೆಸಿವೆ. ಇಸ್ರೇಲ್ ಸೈನಿಕರು ಹಾಗೂ ಹಿಜ್ಬುಲ್ಲಾ ಬಂಡುಕೋರರ ನಡುವೆ ಭೀಕರ ಕದನ ನಡೆದಿದೆ. ಇಸ್ರೇಲ್‌ ಎಂಟು ಯೋಧರನ್ನು ಕಳೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.