ADVERTISEMENT

ಇರಾನ್‌–ಇಸ್ರೇಲ್‌ ನಡುವೆ ಬಿಕ್ಕಟ್ಟು: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಆಗಸ್ಟ್ 2024, 7:15 IST
Last Updated 4 ಆಗಸ್ಟ್ 2024, 7:15 IST
   

ಟೆಲ್‌ ಅವಿವ್‌/ಟೆಹರಾನ್‌: ಹಮಾಸ್‌ ನಾಯಕ ಇಸ್ಮಾಯಿಲ್‌ ಹನಿಯೆ ಹಾಗೂ ಹೆಜ್ಬೊಲ್ಲಾ (ಇರಾನ್‌ ಬೆಂಬಲಿತ ಲೆಬನಾನ್‌ ಸೈನಿಕಪಡೆ)ದ ಕಮಾಂಡರ್‌ ಹತ್ಯೆ ಬಳಿಕ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ.

ಇರಾನ್‌ ದೇಶದ ಒಳಗಡೆಯೇ ಹನಿಯೆ ಮತ್ತು ಹೆಜ್ಬೊಲ್ಲಾ ಕಮಾಂಡರ್‌ನನ್ನು ಹತ್ಯೆ ಮಾಡಿದ್ದು ಇರಾನ್‌ ನಾಯಕತ್ವಕ್ಕೆ ಭಾರಿ ಮುಜುಗರ ಉಂಟುಮಾಡಿತ್ತು. 

ಹನಿಯೆ ಉಳಿದುಕೊಂಡಿದ್ದ ಅತಿಥಿ ಗೃಹದಲ್ಲಿ ವ್ಯಾಪಕ ಭದ್ರತೆ ಮಾಡಲಾಗಿತ್ತು. ಇದನ್ನು ಭೇದಿಸಿ ಇಸ್ರೇಲ್‌ ಪಡೆ ಹತ್ಯೆ ಮಾಡಿತ್ತು. ಈ ಘಟನೆ ಬಳಿಕ ಭದ್ರತೆಯಲ್ಲಿ ಉಂಟಾದ ಲೋಪಕ್ಕೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು, ಸೇನಾಧಿಕಾರಿಗಳು ಹಾಗೂ ರಾಜಧಾನಿಯ ಸೇನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಮಂದಿಯನ್ನು ಇರಾನ್‌ ಸರ್ಕಾರ ಬಂಧಿಸಲಾಗಿದೆ.

ADVERTISEMENT

ಹನಿಯೆ ಹತ್ಯೆಗೆ ಇಸ್ರೇಲ್‌ ಕಾರಣ ಎಂದು ಹಮಾಸ್‌ ಇರಾನ್‌ನ ಪ್ಯಾರಾ ಮಿಲಿಟರಿ ರೆವಲ್ಯೂಷನರಿ ಗಾರ್ಡ್‌ ತಿಳಿಸಿದೆ. ಇದಕ್ಕೆ ಪ್ರತೀಕಾರ ತಿರಿಸಿಕೊಳ್ಳುವುದಾಗಿ ಅದು ಹೇಳಿದೆ.

ಈ ನಡುವೆ ಲೆಬನಾನ್‌ ರಾಜಧಾನಿ ಬೈರುತ್‌ ಪ್ರದೇಶದ ಮೇಲೆ ಇಸ್ರೇಲ್‌ ನಡೆಸಿದ ವಾಯುದಾಳಿ ಬಿಕ್ಕಟ್ಟನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಈ ಘಟನೆ ಬಳಿಕ ಇರಾನ್‌ ನೆರವಿನೊಂದಿಗೆ ಸೇಡು ತೀರಿಸಿಕೊಳ್ಳಲು ಮುಂದಾಗಿರುವ ಹೆಜ್ಬೊಲ್ಲಾ ಪಡೆ ಇಸ್ರೇಲ್‌ ಮೇಲಿನ ದಾಳಿಗೆ ಸಿದ್ಧವಾಗಿವೆ. 

ಈ ಎರಡು ಪ್ರಮುಖ ಕಾರಣಗಳು ಇರಾನ್‌–ಇಸ್ರೇಲ್‌ ನಡುವಿನ ಯುದ್ಧಕ್ಕೆ ಕಾರಣವಾಗಿವೆ. ಇರಾನ್‌ ಪರವಾಗಿ ಲೆಬನಾನ್‌ ಕೂಡ ನಿಲ್ಲಲ್ಲಿದೆ ಎಂದು ಪ್ಯಾರಾ ಮಿಲಿಟರಿ ರೆವಲ್ಯೂಷನರಿ ಗಾರ್ಡ್‌ ತಿಳಿಸಿದೆ. ಈಗಾಲೇ ಈ ಎರಡು ರಾಷ್ಟ್ರಗಳು ಮಿಲಿಟರಿ ಸಿದ್ಧತೆ ಮಾಡಿಕೊಂಡಿದ್ದು ಇಸ್ರೇಲ್‌ ಮೇಲೆ ಯಾವುದೇ ಕ್ಷಣದಲ್ಲಿ ದಾಳಿಗೆ ಮುಂದಾಗಬಹುದು ಎಂದು ಮೂಲಗಳು ತಿಳಿಸಿವೆ. 

ರಷ್ಯಾ-ಉಕ್ರೇನ್‌ ಹಾಗೂ ಇಸ್ರೇಲ್‌-ಪ್ಯಾಲೆಸ್ತೀನ್‌ ನಡುವಿನ ಸಮರದ ಬಳಿಕ ಭುಗಿಲೆದ್ದಿರುವ 3ನೇ ಪ್ರಾದೇಶಿಕ ಸಮರ (ಇರಾನ್‌–ಇಸ್ರೇಲ್‌) ಇದಾಗಲಿದೆ.

ಭಾರತೀಯರಿಗೆ ಎಚ್ಚರಿಕೆ: ಇರಾನ್‌- ಇಸ್ರೇಲ್‌ ನಡುವಿನ ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿರುವ ಭಾರತದ ಪ್ರಜೆಗಳಿಗೆ ಕೇಂದ್ರ ಸರಕಾರ ಎಚ್ಚರಿಕೆ ನೀಡಿದ್ದು, ಅನವಶ್ಯಕ ಪ್ರಯಾಣ ರದ್ದುಗೊಳಿಸಿ, ಮನೆಯಲ್ಲಿಯೇ ಸುರಕ್ಷಿತವಾಗಿರುವಂತೆ ಸೂಚಿಸಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.