ADVERTISEMENT

ಇರಾನ್ ಅಧ್ಯಕ್ಷರ ಹೆಲಿಕಾಪ್ಟರ್ ಪತನದ ಸ್ಥಳ ಪತ್ತೆ ಮಾಡಿದ ಟರ್ಕಿ ಡ್ರೋನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಮೇ 2024, 3:38 IST
Last Updated 20 ಮೇ 2024, 3:38 IST
Venugopala K.
   Venugopala K.

ಟೆಹ್ರಾನ್(ಇರಾನ್): ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಹೆಲಿಕಾಪ್ಟರ್ ಪತನಗೊಂಡ ಸ್ಥಳವನ್ನು ಟರ್ಕಿಯ ಡ್ರೋನ್ ಅಕಿನ್ಸಿ ಪತ್ತೆ ಮಾಡಿದ್ದು,ಇರಾನ್‌ನ ರಕ್ಷಣಾ ಕಾರ್ಯಾಚರಣೆಯ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಇರಾನ್ ಸುದ್ದಿ ವಾಹಿನಿ ಪ್ರೆಸ್ ಟಿವಿ ವರದಿ ಮಾಡಿದೆ.

ಸುದ್ದಿ ವಾಹಿನಿ ಪ್ರಕಾರ, ಹೆಲಿಕಾಪ್ಟರ್ ಪತನಗೊಂಡಿರುವ ಪರ್ವತ ಪ್ರದೇಶದಲ್ಲಿ ದಟ್ಟ ಮಂಜು ಆವರಿಸಿದ್ದು, ಶಾಖವಿರುವ ಪ್ರದೇಶವನ್ನು ಡ್ರೋನ್ ಪತ್ತೆಮಾಡಿದೆ. ಅದುವೇ ಹೆಲಿಕಾಪ್ಟರ್ ಪತನದ ಜಾಗವಿರಬಹುದು ಎಂದು ನಂಬಲಾಗಿದೆ. ಈ ಪ್ರದೇಶದಲ್ಲಿ ಇಂಧನದ ವಾಸನೆಯು ಸಹ ಕಂಡುಬಂದಿರುವುದು ಈ ಊಹೆಗೆ ಇಂಬು ನೀಡಿದೆ ಎಂದು ವರದಿ ತಿಳಿಸಿದೆ.

ಆದರೆ, ಕಾರಿನ ಇಂಧನದ ವಾಸನೆಯನ್ನು ಹೆಲಿಕಾಪ್ಟರ್ ಇಂಧನದ ವಾಸನೆ ಎಂದು ತಪ್ಪಾಗಿ ಗ್ರಹಿಸಲಾಗಿದೆ ಎಂದು ಮತ್ತೊಂದು ಸುದ್ದಿ ವಾಹಿನಿ ತಸ್ನಿಮ್ ವರದಿ ಮಾಡಿದೆ.

ADVERTISEMENT

ಇತ್ತ, ರಷ್ಯಾದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ವಿಮಾನಗಳು ಸಹ ಇರಾನ್‌ ವಾಯುವ್ಯ ಭಾಗದಲ್ಲಿರುವ ತಬ್ರೀಜ್ ನಗರದತ್ತ ಹೊರಟಿವೆ.

ಅಧ್ಯಕ್ಷರ ಹೆಲಿಕಾಪ್ಟರ್ ಪತ್ತೆ ಮಾಡಲು ಟರ್ಕಿಯ ನೈಟ್ ವಿಷನ್ ಹೆಲಿಕಾಪ್ಟರ್‌ಗಳನ್ನು ಕಳುಹಿಸಲು ಇರಾನ್ ಮನವಿ ಮಾಡಿತ್ತು. ಅದರಂತೆ, 6 ನೈಟ್ ವಿಷನ್ ಮತ್ತು ಶೋಧ ಕಾರ್ಯಾಚರಣೆಯ ಹೆಲಿಕಾಪ್ಟರ್‌ಗಳು ಮತ್ತು 32 ಮಂದಿ ಪರ್ವತಾರೋಹಿಗಳನ್ನು ಕಳುಹಿಸಲಾಗಿದೆ ಎಂದು ಟರ್ಕಿಯ ವಿಪತ್ತು ಮತ್ತು ತುರ್ತು ನಿರ್ವಹಣಾ ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.