ಟೆಹರಾನ್:ಅಮೆರಿಕದ ದಾಳಿಯಲ್ಲಿ ಹತರಾಗಿದ್ದ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಕೋರ್‌ನ ಕಮಾಂಡರ್ ಮೇಜರ್ ಜನರಲ್ ಖಾಸಿಂ ಸುಲೇಮಾನಿ ಪಾರ್ಥಿವ ಶರೀರ ಅವರ ಹುಟ್ಟೂರಾದ ಕೆರ್ಮನ್ ತಲುಪಿದ್ದು, ಅಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಖಾಸಿಂ ಸುಲೇಮಾನಿ ಸಾವಿನ ಹಿನ್ನೆಲೆಯಲ್ಲಿ ಇರಾನ್ ಸರ್ಕಾರ ಘೋಷಣೆ ಮಾಡಿದ್ದ ಮೂರು ದಿನಗಳ ಶೋಕಾಚರಣೆ ಇಂದಿಗೆ (ಮಂಗಳವಾರ) ಮುಕ್ತಾಯವಾಗಿದೆ.
ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಸುಲೇಮಾನಿ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಬಳಿಕ ನಡೆದಿದ್ದ ಅಂತಿಮಯಾತ್ರೆಯಲ್ಲಿ ಲಕ್ಷಾಂತರ ಜನಮೇಜರ್ ಜನರಲ್‌ಗೆ ಭಾವಪೂರ್ಣ ವಿದಾಯ ಹೇಳಿದ್ದರು. ಅಂತಿಮ ಯಾತ್ರೆಯ ವೇಳೆ ಜನರು ಬೀದಿಬೀದಿಗಳಲ್ಲಿ ನಿಂತು, ಇರಾನ್ ಧ್ವಜ ಹಿಡಿದುಕೊಂಡು ಘೋಷಣೆ ಕೂಗುತ್ತಿದ್ದ ದೃಶ್ಯವನ್ನು ಇರಾನ್‌ನ ಸರ್ಕಾರಿ ಸುದ್ದಿವಾಹಿನಿ ಪ್ರಸಾರ ಮಾಡಿತ್ತು. ರಸ್ತೆಗಳಲ್ಲಿ ನಿಂತಿದ್ದ ಜನರು ಪ್ರತೀಕಾರಕ್ಕಾಗಿ ಘೋಷಣೆಗಳನ್ನು ಕೂಗುತ್ತಿದ್ದರು ಎಂದು ಅಲ್ ಜಝೀರಾ ಸುದ್ದಿವಾಹಿನಿ ವರದಿ ಮಾಡಿದೆ.
ಖಾಸಿಂ ಸುಲೇಮಾನಿ ಅವರನ್ನು ಇರಾಕ್ ರಾಜಧಾನಿ ಬಾಗ್ದಾದ್‌ನ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಅಮೆರಿಕವು ಕ್ಷಿಪಣಿ ದಾಳಿ ಮೂಲಕ ಹತ್ಯೆ ಮಾಡಿತ್ತು. ಅಮೆರಿಕವು ಇದನ್ನು ಸಮರ್ಥಿಸಿಕೊಂಡಿದ್ದರೆ ಇರಾನ್ ಪ್ರತೀಕಾರದ ಬೆದರಿಕೆಯೊಡ್ಡಿತ್ತು. ಆದರೆ, ಪ್ರತೀಕಾರಕ್ಕೆ ಮುಂದಾದರೆ ಇರಾನ್‌ನ 52 ಸ್ಥಳಗಳ ಮೇಲೆ ದೊಡ್ಡ ಪ್ರಮಾಣದ ದಾಳಿ ನಡೆಯಲಿದೆ ಎಂದು ಅಮೆರಿಕ ಬೆದರಿಕೆಯೊಡ್ಡಿತ್ತು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.