ದುಬೈ: ಲೆಬನಾನ್ ರಾಜಧಾನಿ ಬೈರೂತ್‌ನಲ್ಲಿ ಸಂಭವಿಸಿದ ಭಾರಿ ಸ್ಫೋಟ ಪ್ರಕರಣದ ವಿಷಯದಲ್ಲಿ ಯಾವ ದೇಶಗಳೂ ರಾಜಕೀಯ ಬೆರಸಬಾರದು, ಪ್ರಾಮಾಣಿಕವಾಗಿ ತನಿಖೆ ನಡೆಸಲು ಸಹಕರಿಸಬೇಕು ಎಂದು ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ಬಾಸ್ ಮೌಸವಿ ಹೇಳಿದ್ದಾರೆ.
ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ’ಕೆಲವು ದೇಶಗಳು ತಮ್ಮ ಸ್ವಹಿತಾಸಕ್ತಿಗಾಗಿ ಈ ಪ್ರಕರಣವನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿವೆ. ಆದರೆ, ಯಾವುದೇ ಕಾರಣಕ್ಕೂ ಈ ವಿಷಯದಲ್ಲಿ ರಾಜಕೀಯ ಬೆರೆಸಬಾರದು. ಎಲ್ಲ ರಾಷ್ಟ್ರಗಳು ಈ ಸ್ಫೋಟದ ತನಿಖೆಯನ್ನು ಎಚ್ಚರಿಕೆಯಿಂದ ನಡೆಸಲು ಅನುವು ಮಾಡಿಕೊಡಬೇಕು’ ಎಂದು ಹೇಳಿದ್ದಾರೆ.
’ಅಮೆರಿಕ, ಲೆಬನಾನ್‌ಗೆ ನೀಡುತ್ತಿರುವ ಸಹಾಯಾಸ್ತ ನೈಜವಾಗಿದ್ದರೆ, ಮೊದಲು ಲೆಬನಾನ್ ಮೇಲೆ ವಿಧಿಸಿರುವ ನಿರ್ಬಂಧವನ್ನು ತೆಗೆದು ಹಾಕಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೊನ್ ಅವರು ಇತ್ತೀಚೆಗೆ ಬೇರೂತ್‌ಗೆ ಭೇಟಿ ನೀಡಿ, ಸ್ಫೋಟದಿಂದ ತೀವ್ರವಾಗಿ ಹಾನಿಗೊಳಗಾಗಿರುವ ಪ್ರದೇಶಗಳ ಪರಿಸ್ಥಿತಿಯನ್ನು ಪರಿಶೀಲಿಸಿದ್ದರು. ಈ ವೇಳೆ ’ದಶಕಗಳಿಂದ ಇಲ್ಲಿ ನಡೆಯುತ್ತಿರುವ ಭ್ರಷ್ಟರಾಜಕೀಯವನ್ನು ಕೊನೆಗೊಳಿಸಿ’ ಎಂದು ಜನರು ಒತ್ತಾಯಿಸಿದ್ದರು. ಮ್ಯಾಕ್ರೊನ್ ಭೇಟಿ ಕುರಿತು ಕೇಳಿದ ಪ್ರಶ್ನೆಗೆ ಮೌಸವಿ, ’ಕೆಲವರು ಈ ಪ್ರಕರಣವನ್ನು ಸ್ವ ಹಿತಾಸಕ್ತಿಗಾಗಿ ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದಷ್ಟೇ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.