ADVERTISEMENT

ಇಸ್ರೇಲ್ ಮೇಲೆ ಇರಾನ್ ದಾಳಿ: ಬೈಡನ್ ಎಚ್ಚರಿಕೆ

ರಾಯಿಟರ್ಸ್
Published 13 ಏಪ್ರಿಲ್ 2024, 4:23 IST
Last Updated 13 ಏಪ್ರಿಲ್ 2024, 4:23 IST
<div class="paragraphs"><p>ಜೋ ಬೈಡನ್</p></div>

ಜೋ ಬೈಡನ್

   

(ರಾಯಿಟರ್ಸ್ ಚಿತ್ರ)

ವಾಷಿಂಗ್ಟನ್: ಇಸ್ರೇಲ್‌ ಮೇಲೆ ಇರಾನ್‌ ಶೀಘ್ರವೇ ದಾಳಿ ನಡೆಸುವ ಸಾಧ್ಯತೆ ಇದ್ದು, ಇಂತಹ ದುಃಸಾಹಸಕ್ಕೆ ಕೈಹಾಕದಂತೆ ಆ ದೇಶಕ್ಕೆ ಎಚ್ಚರಿಕೆ ನೀಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಶುಕ್ರವಾರ ಹೇಳಿದ್ದಾರೆ.

ADVERTISEMENT

ನಾಗರಿಕ ಹಕ್ಕುಗಳ ಸಮ್ಮೇಳನದಲ್ಲಿ ವರ್ಚುವಲ್‌ ಭಾಷಣ ಮಾಡಿದ ನಂತರ ಅವರು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಇರಾನ್‌ಗೆ ಏನು ಸಂದೇಶ ನೀಡುತ್ತೀರಿ’ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಬೈಡನ್‌, ‘ಯುದ್ಧಕ್ಕೆ ಇಳಿಯಬೇಡಿ. ಇಸ್ರೇಲ್‌ನ ರಕ್ಷಣೆಗೆ ಅಮೆರಿಕ ಬದ್ಧವಾಗಿದೆ’ ಎಂದು ಒತ್ತಿ ಹೇಳಿದರು.

‘ಇಸ್ರೇಲ್‌ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ಇಸ್ರೇಲ್‌ಗೆ ಬೇಕಾದ ಎಲ್ಲ ನೆರವನ್ನು ನಾವು ನೀಡಲಿದ್ದೇವೆ. ಯುದ್ಧಕ್ಕೆ ಇಳಿದರೆ ಇರಾನ್‌ ಯಶ ಕಾಣುವುದಿಲ್ಲ’ ಎಂದು ಬೈಡನ್‌ ಹೇಳಿದ್ದಾರೆ.

ಇಸ್ರೇಲ್ ಮೇಲೆ ಇರಾನ್‌ನಿಂದ ನೇರ ದಾಳಿ ಶುಕ್ರವಾರ ಅಥವಾ ಶನಿವಾರ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಇಸ್ರೇಲ್ ಮತ್ತು ತನ್ನ ಸೇನಾ ಪಡೆಗಳ ರಕ್ಷಣೆಗೆ ಅಮೆರಿಕ ಯುದ್ಧನೌಕೆಗಳನ್ನು ಕಳುಹಿಸಿದೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’  ವರದಿ ಮಾಡಿತ್ತು.

ಭಾರತ, ಫ್ರಾನ್ಸ್, ಪೋಲೆಂಡ್ ಮತ್ತು ರಷ್ಯಾ ಸೇರಿ ಹಲವು ದೇಶಗಳು ತಮ್ಮ ನಾಗರಿಕರು ಇಸ್ರೇಲ್‌ ಮತ್ತು ಇರಾನ್‌ಗೆ  ಪ್ರಯಾಣಿಸದಂತೆ ಎಚ್ಚರಿಕೆ ನೀಡಿವೆ. ಜರ್ಮನಿ ಕೂಡ ತನ್ನ ನಾಗರಿಕರಿಗೆ ಇರಾನ್ ತೊರೆಯುವಂತೆ ಶುಕ್ರವಾರ ಸೂಚನೆ ನೀಡಿತ್ತು.

ಏ.1ರಂದು ಸಿರಿಯಾ ರಾಜಧಾನಿ ಡಮಾಸ್ಕಸ್‌ನಲ್ಲಿನ ಇರಾನ್‌ ರಾಯಭಾರ ಕಚೇರಿ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ನ ಇಬ್ಬರು ಬ್ರಿಗೇಡಿಯರ್‌ ಜನರಲ್‌ ಸೇರಿ ಏಳು ಸೇನಾಧಿಕಾರಿಗಳು ಹತರಾಗಿದ್ದರು. ಈ ದಾಳಿಗಾಗಿ ಇಸ್ರೇಲ್‌ ಅನ್ನು ಶಿಕ್ಷಿಸದೆ ಬಿಡೆವು ಎಂದು ಇರಾನ್‌ ಪರಮೋಚ್ಚ ನಾಯಕ ಅಯಾತ್‌ ಉಲ್ಲಾ ಅಲಿ ಖಮೇನಿ ಪ್ರತಿಜ್ಞೆ ಗೈದಿದ್ದರು. ಆದರೆ, ಇಸ್ರೇಲ್‌ ಈ ವೈಮಾನಿಕ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

ಇರಾನ್, ಇಸ್ರೇಲ್‌ಗೆ ಪ್ರಯಾಣಿಸದಂತೆ ಸಲಹೆ...

ಭಾರತ ಸೇರಿದಂತೆ ಫ್ರಾನ್ಸ್, ಪೊಲೆಂಡ್, ಜರ್ಮನಿ, ರಷ್ಯಾ ದೇಶಗಳು ಇರಾನ್ ಹಾಗೂ ಇಸ್ರೇಲ್ ದೇಶಗಳಿಗೆ ಪ್ರಯಾಣಿಸದಂತೆ ಪ್ರಯಾಣಿಕರಿಗೆ ಸಲಹೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.