ದುಬೈ: ಇರಾನ್‌ನ ಇಸ್ಲಾಮಿಕ್ ಆಜಾದ್ ಯೂನಿವರ್ಸಿಟಿ ಆವರಣದಲ್ಲಿ ಯುವತಿಯೊಬ್ಬರು ಒಳ ಉಡುಪು ಮಾತ್ರ ಧರಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದರ ಬಗ್ಗೆ ಇರಾನ್ ಸರ್ಕಾರ ಅಧಿಕೃತ ಹೇಳಿಕೆ ನೀಡಿದೆ.
ಯುವತಿ ನಡೆಸಿದ ವಿಚಿತ್ರ ಪ್ರತಿಭಟನೆ ಭದ್ರತಾ ಕಾರಣದಿಂದ ಅಲ್ಲ. ಆ ಯುವತಿ ವೈಯಕ್ತಿಕ ತೊಂದರೆಗೊಳಗಾದ ವ್ಯಕ್ತಿ ಎಂದು ಇರಾನ್ ಸರ್ಕಾರದ ವಕ್ತಾರೆ ಫಾತಿಮಾ ಮೊಹಜೊದಾರಾನಿ ಹೇಳಿದ್ದಾರೆ.
ಈ ಘಟನೆಯನ್ನು ನಾವು ಭದ್ರತಾ ದೃಷ್ಟಿಕೋನದಿಂದ ನೋಡುವುದಿಲ್ಲ. ಬದಲಿಗೆ ವೈಯಕ್ತಿಕ ಸಮಸ್ಯೆಗಳಿಂದ ತೊಂದರೆಗೊಳಗಾದ ವಿದ್ಯಾರ್ಥಿಯ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಪೊಲೀಸ್ ವಶದಲ್ಲಿದ್ದ ವಿದ್ಯಾರ್ಥಿನಿಯನ್ನು ಪೊಲೀಸರಿಂದ ಬಿಡಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ತಿಳಿಸಿರುವ ಅವರು ಅವರಿಗಾದ ವೈಯಕ್ತಿಕ ಸಮಸ್ಯೆ ಏನು? ಎಂಬುದನ್ನು ಬಹಿರಂಗ ಮಾಡಿಲ್ಲ.
ಕಳೆದ ಶನಿವಾರ ಈ ಘಟನೆ ನಡೆದಿದೆ. ವಿಶ್ವವಿದ್ಯಾಲಯದ ವಿಭಾಗವೊಂದರ ಭದ್ರತಾ ಸಿಬ್ಬಂದಿ, ಯುವತಿಯನ್ನು ಬಂಧಿಸಿದ ದೃಶ್ಯಗಳು ವಿಡಿಯೊದಲ್ಲಿವೆ.
‘ಯುವತಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಆಕೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು ಎಂಬುದು ಪೊಲೀಸರು ಕೈಗೊಂಡ ವಿಚಾರಣೆ ವೇಳೆ ತಿಳಿದುಬಂದಿದೆ’ ಎಂದು ವಿಶ್ವವಿದ್ಯಾಲಯ ವಕ್ತಾರ ಅಮಿರ್ ಮಹಜೂಬ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಯುವತಿ ಉದ್ಧೇಶಪೂರ್ವಕವಾಗಿಯೇ ಈ ಬಗೆಯ ಪ್ರತಿಭಟನೆ ಕೈಗೊಂಡಿದ್ದಾಳೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
‘ಒಳ ಉಡುಪು ಮಾತ್ರ ಧರಿಸಿ ಸಾರ್ವಜನಿಕವಾಗಿ ಈ ರೀತಿ ಓಡಾಡುವುದು ಬಹುತೇಕ ಮಹಿಳೆಯರ ಪಾಲಿಗೆ ಭಯಾನಕ ಸಂಗತಿಗಳಲ್ಲೊಂದು. ಕಡ್ಡಾಯವಾಗಿ ಹಿಜಾಬ್ ಧರಿಸಬೇಕು ಎಂಬ ಸರ್ಕಾರದ ಅಸಂಬದ್ಧ ನಿರ್ದೇಶನಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ಇದು’ ಎಂದು ಲೀ ಲಾ ಎಂಬುವವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಘಟನೆ ಕುರಿತ ವಿಡಿಯೊವನ್ನು ಕೂಡ ಹಂಚಿಕೊಂಡಿದ್ದಾರೆ.
ಇರಾನ್‌ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಸಡಿಲ ಉಡುಪು ಹಾಗೂ ಹಿಜಾಬ್ ಧರಿಸುವುದು ಕಡ್ಡಾಯ. ಇದನ್ನು ಉಲ್ಲಂಘಿಸಿದವರು ಬಂಧನ ಶಿಕ್ಷೆ ಅನುಭವಿಸಬೇಕು. 2022ರಲ್ಲಿ ಇರಾನ್‌ನ ಕುರ್ದಿಷ್ ಮಹ್ಸಾ ಅಮಿನಿ ಎಂಬ ಮಹಿಳೆಯ ಬಂಧನವಾಗಿತ್ತು. ನಂತರ ಅವರ ಸಾವು ಸಂಭವಿಸಿತ್ತು. ಈ ಕುರಿತು ದೇಶವ್ಯಾಪಿ ಪ್ರತಿಭಟನೆಗಳು ನಡೆದಿದ್ದವು. ಮಹಿಳೆಯರು ಹಿಜಾಬ್ ಅನ್ನು ಬೆಂಕಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ ತೆಗೆದ ಆರೋಪದಡಿ ಇರಾನ್ ನಟಿ ಹೆಂಗಮೆ ಘಾಜಿಯಾನಿ ಸಹಿತ ಹಲವರನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ 500 ಪ್ರತಿಭಟನಾಕಾರರು ಮೃತಪಟ್ಟಿದ್ದರು.
1980ರಲ್ಲಿ ಬಂದ ಈ ಕಾನೂನಿನ ರಕ್ಷಣೆಗೆ 2006ರಲ್ಲಿ ಗಸ್ತ್ ಎ ಇರ್ಷಾದ್ ಎಂಬ ನೈತಿಕ ಪೊಲೀಸ್ ತಂಡ ರಚನೆಗೊಂಡಿತು. ಈ ಗುಂಪು ಸಾರ್ವಜನಿಕ ಸ್ಥಳ, ಶಾಲೆ, ಕಾಲೇಜುಗಳಲ್ಲಿ ಗಸ್ತು ತಿರುಗಿ ಮಹಿಳೆಯರ ಉಡುಪನ್ನು ಅವಲೋಕಿಸುವ ಹೊಣೆ ಹೊತ್ತಿದ್ದಾರೆ. ಇದನ್ನು ವಿರೋಧಿಸಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.