ADVERTISEMENT

ಇರಾನ್‌: ಅಧ್ಯಕ್ಷರ ಆಯ್ಕೆಗೆ ಮತದಾನ

ಏಜೆನ್ಸೀಸ್
Published 28 ಜೂನ್ 2024, 11:15 IST
Last Updated 28 ಜೂನ್ 2024, 11:15 IST
<div class="paragraphs"><p>ರಾಯಿಟರ್ಸ್ ಚಿತ್ರ</p></div>

ರಾಯಿಟರ್ಸ್ ಚಿತ್ರ

   

ದುಬೈ: ಕಳೆದ ತಿಂಗಳು ಹೆಲಿಕಾಪ್ಟರ್‌ ಅಪಘಾತದಲ್ಲಿ ಮೃತಪಟ್ಟ ಇಬ್ರಾಹಿಂ ರೈಸಿ ಅವರ ಉತ್ತರಾಧಿಕಾರಿಯ ಆಯ್ಕೆಗೆ ಶುಕ್ರವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಇರಾನ್‌ನ ಮತದಾರರ ತಮ್ಮ ಹಕ್ಕು ಚಲಾಯಿಸಿದರು.

ಬೆಳಿಗ್ಗೆ 8 ರಿಂದ ಸಂಜೆ 6ರ ವರೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಕೆಲವೆಡೆ ಜನರು ಉತ್ಸಾಹದಿಂದ ಪಾಲ್ಗೊಂಡರೆ, ಕೆಲವು ಭಾಗಗಳಲ್ಲಿ ನೀರಸ ಪ್ರತಿಕ್ರಿಯೆ ಕಂಡುಬಂತು. ಇಸ್ರೇಲ್‌–ಹಮಾಸ್‌ ಯುದ್ಧದ ಕಾರಣ ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ಸ್ಥಿತಿಯಿದ್ದು, ಇದರ ನಡುವೆಯೇ ಚುನಾವಣೆ ನಡೆದಿದೆ.

ADVERTISEMENT

ಈ ಬಾರಿ ನಾಲ್ಕು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಂಪ್ರದಾಯವಾದಿಗಳಾಗಿ ಗುರುತಿಸಿರುವ ಸಯೀದ್‌ ಜಲೀಲಿ ಮತ್ತು ಪಾರ್ಲಿಮೆಂಟ್‌ನ ಸ್ಪೀಕರ್‌ ಮೊಹಮ್ಮದ್ ಬಾಘಿರ್‌ ಖಲೀಬಫ್ ಹಾಗೂ ಶಿಯಾ ಧರ್ಮಗುರು ಮೊಸ್ತಫಾ ಪೋರ್‌ಮೊಹಮ್ಮದಿ ನಡುವೆ ‘ತ್ರಿಕೋನ’ ಸ್ಪರ್ಧೆ ಏರ್ಪಟ್ಟಿದೆ ಎಂದು ವಿಶ್ಲೇಷಿಸಲಾಗಿದೆ. ಸುಧಾರಣಾವಾದಿ ಅಭ್ಯರ್ಥಿ ಮಸೂದ್ ಪೆಜೆಶ್‌ಕಿಯಾನ್‌ ಅವರು ಕಣದಲ್ಲಿರುವ ಇನ್ನೊಬ್ಬ ಸ್ಪರ್ಧಿ. 

ಟೆಹರಾನ್‌ ಮೇಯರ್‌ ಅಲಿರೆಜಾ ಝಕಾನಿ ಮತ್ತು ಇಬ್ರಾಹಿಂ ರೈಸಿ ಅವರ ಆಡಳಿತದಲ್ಲಿ ಉಪಾಧ್ಯಕ್ಷರುಗಳಲ್ಲಿ ಒಬ್ಬರಾಗಿದ್ದ ಅಮೀರ್‌ಹೊಸೇನ್ ಘಜೀಜಾದೇ ಹಾಶಿಮಿ ಅವರು ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರೂ, ಕೊನೆಯ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.

ಇರಾನ್‌ನಲ್ಲಿ ಈ ಬಾರಿ ಸುಮಾರು ಆರು ಕೋಟಿ ಮಂದಿ ಮತದಾನದ ಅರ್ಹತೆ ಹೊಂದಿದ್ದಾರೆ. ಇದರಲ್ಲಿ 1.8 ಕೋಟಿ ಮತದಾರರು 18 ರಿಂದ 30 ವರ್ಷದವರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.