ದುಬೈ: ‘ಗಾಜಾ ಮೇಲೆ ನಡೆಸುತ್ತಿರುವ ತನ್ನ ‘ದೌರ್ಜನ್ಯ’ ನಿಲ್ಲಿಸದಿದ್ದರೆ, ಇಸ್ರೇಲ್ ಮತ್ತೊಂದು ಆಘಾತವನ್ನು ಎದುರಿಸಬೇಕಾಗಲಿದೆ’ ಎಂದು ಇರಾನ್‌ನ ಎಲೈಟ್ ರೆವಲೂಷನರಿ ಗಾರ್ಡ್ಸ್‌ನ ಡೆಪ್ಯುಟಿ ಕಮಾಂಡರ್ ಎಚ್ಚರಿಕೆ ನೀಡಿದ್ದಾರೆ ಎಂದು ಇರಾನ್ ಸರ್ಕಾರಿ ಸುದ್ದಿ ಸಂಸ್ಥೆ ಮಂಗಳವಾರ ವರದಿ ಮಾಡಿದೆ.
‘ವಿಶ್ವ ಭೂಪಟದಿಂದ ಝಿಯಾನಿಸ್ಟ್ ಆಡಳಿತ (ಇಸ್ರೇಲ್) ಎಂಬ ‘ಕ್ಯಾನ್ಸರ್ ಗೆಡ್ಡೆ’ ನಿರ್ಮೂಲನೆ ಆಗುವವರೆಗೂ ಈ ಕಾರ್ಯಾಚರಣೆ ಮುಂದುವರಿಯಲಿದೆ’ ಎಂದು ಅಲಿ ಫದಾವಿ ಹೇಳಿದ್ದಾರೆ.
ಪ್ಯಾಲೆಸ್ಟೀನ್ ಮೇಲಿನ ಇಸ್ರೇಲ್ ದಾಳಿಯನ್ನು ಬಲವಾಗಿ ಖಂಡಿಸಿರುವ ಇರಾನ್‌ನ ಪರಮೋಚ್ಛ ನಾಯಕ ಅಯಾತೊಲ್ಹಾ ಅಲಿ ಖಮೆನೀ, ‘ಪ್ಯಾಲೆಸ್ಟೀನ್ ಜನರ ಮೇಲೆ ಇಸ್ರೇಲ್ ಅಧಿಕಾರಿಗಳು ನಡೆಸುತ್ತಿರುವ ಅಪರಾಧಗಳಿಗಾಗಿ ಅವರು ವಿಚಾರಣೆ ಎದುರಿಸಬೇಕಾಗಲಿದೆ’ ಎಂದು ಗುಡುಗಿದ್ದಾರೆ.
1979ರಲ್ಲಿ ಸಂಭವಿಸಿದ ಇಸ್ಲಾಮಿಕ್ ಕ್ರಾಂತಿಯ ನಂತರ ಪ್ಯಾಲೆಸ್ಟೀನ್ ವಿಷಯದಲ್ಲಿ ಇರಾನ್‌ನ ಆಡಳಿತಗಾರರು ಸದಾ ಧ್ವನಿಯಾಗಿದ್ದಾರೆ. ಹಮಾಸ್ ಬೆಂಬಲಿಸುವುದರಲ್ಲಿ ಟೆಹರಾನ್ ಯಾವುದೇ ಗೋಪ್ಯತೆ ಹೊಂದಿಲ್ಲ. ಗಾಜಾ ಮೇಲೆ ನಿಯಂತ್ರಣ ಹೊಂದಿರುವ ಹಮಾಸ್‌ಗೆ ಹಣಕಾಸು ಹಾಗೂ ಶಸ್ತ್ರಾಸ್ತ್ರ ಪೂರೈಕೆಯನ್ನು ಇರಾನ್ ಮಾಡುತ್ತಿದೆ.
‘ಪ್ಯಾಲೆಸ್ಟೀನ್ ಜನರ ವಿರುದ್ಧ ಇಸ್ರೇಲ್‌ನ ಈ ದಬ್ಬಾಳಿಕೆ ಮುಂದುವರಿದರೆ ಮುಸ್ಲಿಮರನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ. ಅದಕ್ಕೂ ಮೊದಲೇ ಗಾಜಾ ಮೇಲಿನ ಬಾಂಬ್ ದಾಳಿಯನ್ನು ಇಸ್ರೇಲ್ ತಕ್ಷಣ ತಡೆಯಬೇಕು’ ಎಂದು ಖಮೆನೀ ಎಚ್ಚರಿಸಿದ್ದಾರೆ.
ಅ. 7ರಂದು ಹಮಾಸ್ ಬಂಡುಕೋರರು ಇಸ್ರೇಲ್‌ನ ದಕ್ಷಿಣ ಭಾಗದಲ್ಲಿ ನಡೆಸಿದ ದಾಳಿಯಲ್ಲಿ 1,300ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದರು. 75 ವರ್ಷಗಳಲ್ಲೇ ಒಂದು ದಿನದಲ್ಲಿ ನಡೆದ ಇಂಥ ದೊಡ್ಡ ಮಟ್ಟದ ಕ್ರೌರ್ಯ ಇದೇ ಮೊದಲು ಎಂದೆನ್ನಲಾಗಿದೆ.
ಇದಾದ ನಂತರ ಇಸ್ರೇಲ್ ಸೇನೆ ವೈಮಾನಿಕ ದಾಳಿ ನಡೆಸಿದೆ. ಇದರಿಂದ 2,800ಕ್ಕೂ ಹೆಚ್ಚು ಪ್ಯಾಲೆಸ್ಟೀನ್ ಜನರು ಮೃತಪಟ್ಟಿದ್ದಾರೆ. ಇವರಲ್ಲಿ ನಾಲ್ಕನೇ ಒಂದು ಭಾಗದಷ್ಟು ಮಕ್ಕಳೇ ಇದ್ದಾರೆ. 23 ಲಕ್ಷಕ್ಕೂ ಅಧಿಕ ಜನ ಮನೆ ತೊರೆದಿದ್ದಾರೆ. ಪ್ಯಾಲೆಸ್ಟೀನ್‌ಗೆ ಪೂರೈಕೆಯಾಗುತ್ತಿದ್ದ ಆಹಾರ, ಇಂಧನ, ವೈದ್ಯಕೀಯ ನೆರವು ಎಲ್ಲವನ್ನೂ ತಡೆ ಹಿಡಿಯಲಾಗಿದೆ. ಹೀಗಾಗಿ ಅಲ್ಲಿ ತೀವ್ರ ಹಾಹಾಕಾರ ಎದುರಾಗಿದೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.