ಟೆಹ್ರಾನ್: ಇರಾನ್‌ನ ಬೃಹತ್ ಯುದ್ಧನೌಕೆ ‘ಖಾರ್ಗ್‘ ಬೆಂಕಿಗೆ ಆಹುತಿಯಾಗಿದ್ದು, ಒಮಾನ್ ಗಲ್ಪ್ ಪ್ರದೇಶದಲ್ಲಿ ಮುಳುಗಿದೆ, ಈ ಅಪಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಬುಧವಾರ ಮುಂಜಾನೆ 2.25ರ ಸುಮಾರಿಗೆ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿ ನಂದಿಸುವ ಯತ್ನ ವಿಫಲವಾಯಿತು ಎಂದು ಫಾರ್ಸ್ ಸುದ್ದಿ ಸಂಸ್ಥೆ ಹೇಳಿದೆ.
ಪರ್ಷಿಯನ್ ಕೊಲ್ಲಿಯ ಹಾರ್ಮುಜ್ ಜಲಸಂಧಿಯ ಬಳಿ ಒಮಾನ್ ಕೊಲ್ಲಿಯಲ್ಲಿ ಜಾಸ್ಕ್ ಬಂದರಿನ ಸಮೀಪ ಹಡಗು ಮುಳುಗಿತು.
1977ರಲ್ಲಿ ಬ್ರಿಟನ್‌ನಲ್ಲಿ ನಿರ್ಮಾಣವಾದ ಈ ಯುದ್ಧನೌಕೆ 1984ರಲ್ಲಿ ಇರಾನ್‌ಗೆ ಹಸ್ತಾಂತರಗೊಂಡಿತ್ತು. ಪ್ರಮುಖ ಸರಕು ಸಾಗಣೆ ನೌಕೆಯಾಗಿ ಹಾಗೂ ಹೆಲಿಕಾಪ್ಟರ್‌ಗಳ ಚಿಮ್ಮು ಹಲಗೆಯಾಗಿ ಇದು ಬಳಕೆಯಾಗುತ್ತಿತ್ತು.
ನೌಕಾಪಡೆಯ ಮೂರನೇ ದುರಂತ: ಇರಾನ್ ನೌಕಾಪಡೆಯಲ್ಲಿ ಈಚಿನ ವರ್ಷಗಳಲ್ಲಿ ಸಂಭವಿಸಿದ ಮೂರನೇ ದೊಡ್ಡ ದುರಂತ ಇದು.2020ರಲ್ಲಿ ಜಸ್ಕ್ ಬಂದರಿನ ಬಳಿ ಕ್ಷಿಪಣಿಯೊಂದು ಅಚಾತುರ್ಯದಿಂದ ನೌಕಾಪಡೆಯ ಹಡಗೊಂದಕ್ಕೆ ಅಪ್ಪಳಿಸಿದ್ದರಿಂದ 19 ಮಂದಿ ನೌಕಾಪಡೆ ಸಿಬ್ಬಂದಿ ಮೃತಪಟ್ಟಿದ್ದರು. 2018ರಲ್ಲಿ ನೌಕಾಪಡೆಯ ಯುದ್ಧನೌಕೆಯೊಂದು ಕ್ಯಾಸ್ಪಿಯನ್ ಸಮುದ್ರದಲ್ಲಿ ಮುಳುಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.