ADVERTISEMENT

ಅಗತ್ಯ ಎನಿಸಿದರೆ ಮತ್ತೆ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ: ಅಯತ್ಉಲ್ಲಾ ಅಲಿ ಖಮೇನಿ

ಇರಾನ್‌ ನಾಯಕ ಅಯತ್‌ಉಲ್ಲಾ ಅಲಿ ಖಮೇನಿ ಎಚ್ಚರಿಕೆ * ಲೆಬನಾನ್ ಮೇಲೆ ಮುಂದುವರಿದ ಇಸ್ರೇಲ್‌ ದಾಳಿ

ಏಜೆನ್ಸೀಸ್
Published 4 ಅಕ್ಟೋಬರ್ 2024, 15:45 IST
Last Updated 4 ಅಕ್ಟೋಬರ್ 2024, 15:45 IST
ಇರಾನ್‌ ಪರಮೋಚ್ಛ ನಾಯಕ ಅಯತ್ ಉಲ್ಲಾ ಅಲಿ ಖಮೇನಿ ಧರ್ಮ ಪ್ರವಚನ ಆಲಿಸಲು ಟೆಹ್ರಾನ್‌ನ ಮಸೀದಿ ಬಳಿ ಸೇರಿದ್ದ ಜನಸ್ತೋಮ. ಖಮೇನಿ ಅವರ ಕಚೇರಿಯು ಈ ಚಿತ್ರ ಬಿಡುಗಡೆ ಮಾಡಿದೆ –ಎಎಫ್‌ಪಿ ಚಿತ್ರ
ಇರಾನ್‌ ಪರಮೋಚ್ಛ ನಾಯಕ ಅಯತ್ ಉಲ್ಲಾ ಅಲಿ ಖಮೇನಿ ಧರ್ಮ ಪ್ರವಚನ ಆಲಿಸಲು ಟೆಹ್ರಾನ್‌ನ ಮಸೀದಿ ಬಳಿ ಸೇರಿದ್ದ ಜನಸ್ತೋಮ. ಖಮೇನಿ ಅವರ ಕಚೇರಿಯು ಈ ಚಿತ್ರ ಬಿಡುಗಡೆ ಮಾಡಿದೆ –ಎಎಫ್‌ಪಿ ಚಿತ್ರ   

ಟೆಹ್ರಾನ್‌: ಇಸ್ರೇಲ್‌ ಮೇಲಿನ ಕ್ಷಿಪಣಿ ದಾಳಿ ‘ಸೇನೆಯ ಅತ್ಯುತ್ತಮ ಕಾರ್ಯ’ ಎಂದು ಶ್ಲಾಘಿಸಿರುವ ಇರಾನ್‌ನ ಪರಮೋಚ್ಛ ನಾಯಕ ಅಯತ್ಉಲ್ಲಾ ಅಲಿ ಖಮೇನಿ, ‘ಅಗತ್ಯ ಎನಿಸಿದರೆ ಭವಿಷ್ಯದಲ್ಲಿ ಮತ್ತೆ ದಾಳಿ ನಡೆಯಲಿದೆ’ ಎಂದಿದ್ದಾರೆ. 

ಇರಾನ್‌ ರಾಜಧಾನಿಯಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ, ಇದೇ ಮೊದಲ ಬಾರಿಗೆ 40 ನಿಮಿಷ ಧರ್ಮಪ್ರವಚನ ನೀಡಿದ ಖಮೇನಿ ಅವರು, ಕ್ಷಿಪಣಿ ದಾಳಿ ನಡೆಸಿದ ಕ್ರಮವನ್ನು ಪ್ರಮುಖವಾಗಿ ಶ್ಲಾಘಿಸಿದರು ಎಂದು ಸರ್ಕಾರದ ಟಿ.ವಿ ವರದಿ ಮಾಡಿದೆ.

‘ಇರಾನ್‌ ಮತ್ತು ಅದರ ಮೈತ್ರಿಕೂಟಗಳು ಇಸ್ರೇಲ್‌ ವಿರುದ್ಧದ ಹೋರಾಟ ಮುಂದುವರಿಸಲಿವೆ. ಕ್ಷಿಪಣಿ ದಾಳಿಯ ಮೂಲಕ ಸೇನೆಯು ಈ ಭೂ ವಲಯ ಹಾಗೂ ಇಸ್ಲಾಮಿಕ್‌ ಜಗತ್ತಿಗೆ ನಿರ್ಣಾಯಕವನ್ನು ಸೇವೆ ಸಲ್ಲಿಸಿದೆ’ ಎಂದೂ ಹೇಳಿದ್ದಾರೆ.

ADVERTISEMENT

‘ಹಲವರು ಹುತಾತ್ಮರಾಗಿದ್ದಾರೆ. ಈ ವಲಯದಲ್ಲಿ ಈಗ ಎದುರಾಗಿರುವ ಪ್ರತಿರೋಧ ನಿಲ್ಲದು. ನಾವು ಗೆಲ್ಲುತ್ತೇವೆ‘ ಎಂದೂ ಹೇಳಿದ್ದಾರೆ. ಇಸ್ರೇಲ್‌ ಸೇನೆ ಮತ್ತು ಹಿಜ್ಬುಲ್ಲಾ ಬಂಡುಕೋರರ ನಡುವೆ ಸಂಘರ್ಷ ಆರಂಭವಾದ ಬಳಿಕ ಮೊದಲ ಹೇಳಿಕೆ ಇದಾಗಿದೆ.

ಇಸ್ರೇಲ್‌ ದಾಳಿಯಿಂದ ಹತರಾಗಿದ್ದ ಹಿಜ್ಬುಲ್ಲಾ ನಾಯಕ ಹಸನ್‌ ನಸ್ರಲ್ಲಾ ಸ್ಮರಣೆಯು ಇದೇ ವೇಳೆ ನಡೆಯಿತು. ಅಧ್ಯಕ್ಷ ಮಸೂದ್‌ ಪೆಜೆಶ್‌ಕಿಯಾನ್, ಇರಾನ್‌ನ ಉನ್ನತ ಶ್ರೇಣಿಯ ನಾಯಕರು, ಸೇನೆಯ ನಾಯಕರು ಹಾಜರಿದ್ದರು.  

ಮತ್ತೊಂದು ಬೆಳವಣಿಗೆಯಲ್ಲಿ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಗ್ಚಿ, ಶುಕ್ರವಾರ ಬೈರೂತ್‌ಗೆ ಭೇಟಿ ನೀಡಿದ್ದಾರೆ. ಲೆಬನಾನ್‌ಗೆ 10 ಟನ್‌ ಆಹಾರ ಮತ್ತು ಔಷಧ ದಾಸ್ತಾನನ್ನು ಇರಾನ್‌ ಕಳುಹಿಸಿದೆ ಎಂದು ಅದರ ವಕ್ತಾರರು ತಿಳಿಸಿದ್ದಾರೆ.

ಲೆಬನಾನ್‌–ಸಿರಿಯಾ ಸಂಪರ್ಕ ರದ್ದು:  ಇಸ್ರೇಲ್‌ ತನ್ನ ದಾಳಿ ಮುಂದುವರಿಸಿದ್ದು, ಬೈರೂತ್‌ನ ದಕ್ಷಿಣ ಭಾಗದಲ್ಲಿ ಸರಣಿ ಕ್ಷಿಪಣಿ ದಾಳಿ ನಡೆಸಿತು. ಲೆಬನಾನ್ –ಸಿರಿಯಾ ನಡುವಿನ ಸಂಪರ್ಕ ಕಡಿದುಹಾಕಿದೆ.  

ಲೆಬನಾನ್‌ನ ಅಧಿಕೃತ ಸುದ್ದಿ ಮಾಧ್ಯಮದ ವರದಿ ಪ್ರಕಾರ, ಗುರುವಾರ ರಾತ್ರಿ ನಿರಂತರ 10 ಬಾರಿ ವಾಯದಾಳಿ ನಡೆದಿದೆ. ಲೆಬನಾನ್‌ನಿಂದ ಸಿರಿಯಾಗೆ ಸಾವಿರಾರು ಜನರು ವಲಸೆ ಹೋಗುತ್ತಿದ್ದ ಮಾಸ್ನಾ ಗಡಿಯಲ್ಲೇ ದಾಳಿ ನಡೆದಿದೆ ಎಂದು ತಿಳಿಸಿದೆ. 

ಲೆಬನಾನ್ ಮತ್ತು ಸಿರಿಯಾ ನಡುವೆ ಗಡಿ ದಾಟಲು ಆರು ಮಾರ್ಗಗಳಿವೆ. ಎಲ್ಲ ಮಾರ್ಗಗಳಲ್ಲೂ ಸರ್ಕಾರ ಕಣ್ಗಾವಲಿಟ್ಟಿದೆ.  ಈ ಮಾರ್ಗಗಳು ಮುಕ್ತವಾಗಿವೆ ಎಂದು ಲೆಬನಾನ್‌ನ ಸಚಿವರು ತಿಳಿಸಿದ್ದಾರೆ.

ಇಸ್ರೇಲ್‌ ಸೇನೆ ಪ್ರಕಾರ, ಟಲ್ಕರೆಮ್ ಗಡಿಯಲ್ಲಿ ಗುರುವಾರ ಬಂಡುಕೋರರ ನೆಲೆ ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಆದರೆ, ಪ್ರಾಣಹಾನಿ ಕುರಿತಂತೆ ಸೇನೆಯು ವಿವರ ನೀಡಿಲ್ಲ. 

‘ಹಿಜ್ಬುಲ್ಲಾದ 21 ಕಮಾಂಡರ್ ಸೇರಿ 250 ಹೋರಾಟಗಾರರ ಹತ್ಯೆ

ಲೆಬನಾನ್‌ನ ದಕ್ಷಿಣ ಭಾಗದಲ್ಲಿ ನಡೆದ ಕಾರ್ಯಾಚರಣೆ ವೇಳೆ 250 ಮಂದಿ ಹಿಜ್ಬುಲ್ಲಾ ಹೋರಾಟಗಾರರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್‌ ಸೇನೆ ಹೇಳಿಕೊಂಡಿದೆ. ಈ ಕುರಿತ ಹೇಳಿಕೆಯಲ್ಲಿ ಈ ವಲಯದಲ್ಲಿ ಭೂಸೇನೆಯು ಕಾರ್ಯಾಚರಣೆ ಆರಂಭಿಸಿದ ಈ ನಾಲ್ಕು ದಿನಗಳಲ್ಲಿ ಈ ಹತ್ಯೆಗಳು ನಡೆದಿವೆ. ಇವರಲ್ಲಿ 21 ಮಂದಿ ಕಮಾಂಡರ್‌ಗಳು ಸೇರಿದ್ದಾರೆ’ ಎಂದು ಸೇನೆಯು ತಿಳಿಸಿದೆ. ಈವರೆಗೆ ಲೆಬನಾನ್‌ನಲ್ಲಿ ಸುಮಾರು 200 ನೆಲೆ ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಶಸ್ತ್ರಾಸ್ತ್ರ ದಾಸ್ತಾನಿಟ್ಟಿದ್ದ ನೆಲೆ ಮೇಲೂ ದಾಳಿ ನಡೆಸಲಾಗಿದೆ ಎಂದು ಸೇನೆ ತಿಳಿಸಿದೆ.

ಭಯೋತ್ಪಾದಕ ಸಂಘಟನೆ ಪಟ್ಟಿಯಿಂದ ತಾಲಿಬಾನ್ ಕೈಬಿಡಲು ರಷ್ಯಾ ನಿರ್ಧಾರ

ಭಯೋತ್ಪಾದಕ ಸಂಘಟನೆಗಳ ಪಟ್ಟಿಯಿಂದ ತಾಲಿಬಾನ್‌ ಹೆಸರು ಕೈಬಿಡಲು ರಷ್ಯಾ ತೀರ್ಮಾನಿಸಿದೆ ವಿದೇಶಾಂಗ ಸಚಿವಾಲಯವು ತಿಳಿಸಿದೆ. ಹಲವು ಕಾನೂನು ಪ್ರಕ್ರಿಯೆಗಳ ಬಳಿಕ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸರ್ಕಾರದ ಅಧಿಕೃತ ಮಾಧ್ಯಮ ವರದಿ ಮಾಡಿದೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಅಪ್ಗಾನಿಸ್ತಾನದ ವಿಶೇಷ ಪ್ರತಿನಿಧಿ ಝಾಮಿರ್ ಕಬುಲೊವ್‌ ಹೇಳಿಕೆ ಉಲ್ಲೇಖಿಸಿ ಮಾಧ್ಯಮ ವರದಿ ಮಾಡಿದೆ. ‘ಭಯೋತ್ಪಾದನೆ ವಿರುದ್ಧ ಹೋರಾಡಲು ಅಫ್ಗಾನಿಸ್ತಾನದ ತಾಲಿಬಾನ್ ಆಂದೋಲನವನ್ನು ತನ್ನ ಮೈತ್ರಿಯಾಗಿ ಪರಿಗಣಿಸುತ್ತೇವೆ’ ಎಂದು ಪುಟಿನ್ ಕಳೆದ ಜುಲೈನಲ್ಲಿ ಹೇಳಿದ್ದರು. ಜಗತ್ತಿನ ಯಾವುದೇ ದೇಶ ತಾಲಿಬಾನ್‌ನ ನಾಯಕತ್ವವನ್ನು ಒಪ್ಪಿಕೊಂಡಿಲ್ಲ. ಆರೆ ಚೀನಾ ಮತ್ತು ಯುಎಇ ತಾಲಿಬಾನ್‌ನ ರಾಯಭಾರಿಗಳನ್ನು ಒಪ್ಪಿಕೊಂಡಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.