ADVERTISEMENT

ಹೆಲಿಕಾಪ್ಟರ್ ಅಪಘಾತ | ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ಸಚಿವ ಅಮೀರ್ ಸಾವು

ರಾಯಿಟರ್ಸ್
Published 20 ಮೇ 2024, 4:40 IST
Last Updated 20 ಮೇ 2024, 4:40 IST
<div class="paragraphs"><p>ಇರಾನ್‌ನ ಅಧ್ಯಕ್ಷ ಇಬ್ರಾಹಿಂ ರೈಸಿ</p></div>

ಇರಾನ್‌ನ ಅಧ್ಯಕ್ಷ ಇಬ್ರಾಹಿಂ ರೈಸಿ

   

ದುಬೈ: ಇರಾನ್–ಅಜರ್‌ಬೈಜಾನ್ ಗಡಿ ಸನಿಹದ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡು, ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ಅಲ್ಲಿನ ವಿದೇಶಾಂಗ ಸಚಿವ ಹುಸೇನ್ ಅಮಿರ್ ಅಬ್ದುಲ್ಲಾಹಿಯಾನ್ ಹಾಗೂ ಕೆಲವು ಅಧಿಕಾರಿಗಳು ಮೃತಪಟ್ಟಿದ್ದಾರೆ.

ಇರಾನ್‌ನ ಪರಮೋಚ್ಚ ನಾಯಕನ ಸ್ಥಾನಕ್ಕೆ ರೈಸಿ ಅವರೇ ಉತ್ತರಾಧಿಕಾರಿ ಎಂದು ಅಂದಾಜಿಸಲಾಗಿತ್ತು. ಈಗ  ಅಯಾತ್ ಉಲ್ಲಾ ಅಲಿ ಖಮೇನಿ ಅವರು ಇರಾನ್‌ನ ಪರಮೋಚ್ಚ ನಾಯಕರಾಗಿದ್ದಾರೆ.

ADVERTISEMENT

ಭಾನುವಾರ ಪತನಗೊಂಡ ಹೆಲಿಕಾಪ್ಟರ್‌ನ ಅವಶೇಷಗಳು ಸೋಮವಾರ ಮುಂಜಾನೆ ಪತ್ತೆಯಾಗಿವೆ.  ಅಧ್ಯಕ್ಷರು ಇದ್ದ ಹೆಲಿಕಾಪ್ಟರ್‌ ಪರ್ವತಕ್ಕೆ ಬಡಿದು, ಚೂರಾಯಿತು ಎಂದು ಸರ್ಕಾರಿ ಮಾಧ್ಯಮ ಹೇಳಿದೆ. ರೈಸಿ ಹಾಗೂ ಇತರರು ಪೂರ್ವ ಅಜರ್‌ಬೈಜಾನ್‌ ಪ್ರಾಂತ್ಯದಲ್ಲಿ ಅಣೆಕಟ್ಟು ಯೋಜನೆಯೊಂದನ್ನು ಉದ್ಘಾಟಿಸಿ ಮರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಮಧ್ಯ‍ಪ್ರಾಚ್ಯದಲ್ಲಿನ ಅಸ್ಥಿರತೆಯ ನಡುವೆ ಈ ಹೆಲಿಕಾಪ್ಟರ್ ದುರಂತ ನಡೆದಿದೆ. ರೈಸಿ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಇರಾನ್ ದೇಶವು, ರಷ್ಯಾಕ್ಕೆ ಉಕ್ರೇನ್ ಯುದ್ಧದಲ್ಲಿ ಬಳಕೆ ಮಾಡಲು ಬಾಂಬ್‌ಗಳನ್ನು ಹೊತ್ತೊಯ್ಯುವ ಡ್ರೋನ್‌ಗಳನ್ನು ಪೂರೈಸಿತ್ತು.

ಹೆಲಿಕಾಪ್ಟರ್ ಪ‍ತನದ ಕೆಲವು ಗಂಟೆಗಳ ನಂತರ ಘೋಷಣೆಯೊಂದನ್ನು ಹೊರಡಿಸಿದ ಪರಮೋಚ್ಚ ನಾಯಕ ಖಮೇನಿ, ದೇಶದ ಉಪಾಧ್ಯಕ್ಷ ಮೊಹ ಮ್ಮದ್ ಮೊಖಬರ್‌ ಅವರು ಹೊಸದಾಗಿ ಚುನಾವಣೆ ನಡೆಯುವವರೆಗೆ ಹಂಗಾಮಿ ಅಧ್ಯಕ್ಷರಾಗಿ ಕೆಲಸ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಮೊಖಬರ್‌ ಅವರು ಕೂಡ ಖಮೇನಿ ಅವರಿಗೆ ಆಪ್ತರು ಎನ್ನಲಾಗಿದೆ. ಇರಾನ್‌ ಸಂವಿಧಾನದ ಪ್ರಕಾರ, ಹೊಸ ಅಧ್ಯಕ್ಷರ ಆಯ್ಕೆಗೆ 50 ದಿನಗಳಲ್ಲಿ ಚುನಾವಣೆ ನಡೆಯಬೇಕಿದೆ.

ಹೆಲಿಕಾಪ್ಟರ್‌ ಪತನಕ್ಕೆ ಕಾರಣ ಏನು ಎಂಬುದನ್ನು ಸರ್ಕಾರಿ ಮಾಧ್ಯಮವು ತಿಳಿಸಿಲ್ಲ. ಹೆಲಿಕಾಪ್ಟರ್‌ಗೆ ಬೆಂಕಿ ಹೊತ್ತಿಕೊಂಡಿದ್ದ ದೃಶ್ಯಾವಳಿಯನ್ನು ಟರ್ಕಿ ಬಿಡುಗಡೆ ಮಾಡಿದೆ. ಬೆಂಕಿ ಹೊತ್ತಿಕೊಂಡ ಸ್ಥಳವು ಅಜರ್‌ಬೈಜಾನ್–ಇರಾನ್ ಗಡಿಯಿಂದ 20 ಕಿ.ಮೀ. ದಕ್ಷಿಣದಲ್ಲಿ, ಕಡಿದಾದ ಪರ್ವತವೊಂದರ ಪಕ್ಕದಲ್ಲಿ ಇದೆ. 

ಘಟನೆಯಲ್ಲಿ ಯಾರೊಬ್ಬರೂ ಬದುಕಿ ಉಳಿದಿಲ್ಲ ಎಂದು ಇರಾನ್‌ ಹೇಳಿದೆ. ಅಧ್ಯಕ್ಷರ ಸಾವಿನ ಕಾರಣಕ್ಕೆ ನೆರೆಯ ಪಾಕಿಸ್ತಾನವು ಒಂದು ದಿನದ ಶೋಕ ಘೋಷಿಸಿದೆ. 

ಇರಾನ್‌ನಲ್ಲಿ ಐದು ದಿನಗಳ ಕಾಲ ಶೋಕ ಘೋಷಿಸಲಾಗಿದೆ ಎಂದು ಖಮೇನಿ ಅವರ ಸಂದೇಶದಲ್ಲಿ ಹೇಳಲಾಗಿದೆ. ರೈಸಿ ಅವರು ಅಧ್ಯಕ್ಷ ರಾಗಿದ್ದ ಅವಧಿಯಲ್ಲಿ ಇರಾನ್‌ ದೇಶವು, ಇಸ್ರೇಲ್‌ ಮೇಲೆ ಭಾರಿ ಪ್ರಮಾಣದ ವಾಯು ದಾಳಿ ನಡೆಸಿತ್ತು. ರೈಸಿ ಅವರು 2021ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಇರಾನ್‌ ಒಳಗೆ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಬಿಕ್ಕಟ್ಟುಗಳ ಕಾರಣಕ್ಕೆ ಭಿನ್ನಾಭಿಪ್ರಾಯ ಹೆಚ್ಚುತ್ತಿರುವ ಹೊತ್ತಿನಲ್ಲಿ ಈ ದುರಂತ ನಡೆದಿದೆ. ಇರಾನ್ ಜನರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿ ಹಮಾಸ್ ಬಂಡುಕೋರ ಸಂಘಟನೆಯು ಶೋಕ ಸಂದೇಶ ರವಾನಿಸಿದೆ. ಹಮಾಸ್‌ಗೆ ಇರಾನ್‌ನ ಬೆಂಬಲ ಇದೆ. 

ರೈಸಿ ಅವರು ಬದುಕಿ ಬರಲಿ ಎಂದು ಪ್ರಾರ್ಥಿಸಿ ಇರಾನ್ ದೇಶದಾದ್ಯಂತ ಪ್ರಾರ್ಥನೆಗಳು ನಡೆದಿದ್ದವು ಎಂದು ಅಲ್ಲಿನ ರಾಷ್ಟ್ರೀಯ ದೂರದರ್ಶನ ವಾಹಿನಿಯು ವರದಿ ಪ್ರಸಾರ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.