ADVERTISEMENT

ಇಸ್ರೇಲ್‌, ಅಮೆರಿಕಕ್ಕೆ ತೀವ್ರ ಪ್ರತಿದಾಳಿಯ ಎಚ್ಚರಿಕೆ ನೀಡಿದ ಇರಾನ್‌

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2024, 14:41 IST
Last Updated 3 ನವೆಂಬರ್ 2024, 14:41 IST
ಆಯತ್‌ಉಲ್ಲಾ ಅಲಿ ಖಮೇನಿ
ಆಯತ್‌ಉಲ್ಲಾ ಅಲಿ ಖಮೇನಿ   

ದುಬೈ: ಇರಾನ್‌ ಮತ್ತು ಅದರ ಮಿತ್ರರಾಷ್ಟ್ರಗಳ ಮೇಲಿನ ದಾಳಿಗಳಿಗೆ ಪ್ರತಿಯಾಗಿ ತೀವ್ರ ಪ್ರತಿಕ್ರಿಯೆ ನೀಡಲಾಗುವುದು ಎಂದು ಇರಾನ್‌ನ ಸರ್ವೋಚ್ಛ ನಾಯಕ ಆಯತ್‌ ಉಲ್ಲಾ ಅಲಿ ಖಮೇನಿ ಅವರು ಇಸ್ರೇಲ್‌ ಮತ್ತು ಅಮೆರಿಕಕ್ಕೆ ಬೆದರಿಕೆ ಹಾಕಿದ್ದಾರೆ.

ಇರಾನ್‌ನ ಸೇನಾ ನೆಲೆಗಳು ಮತ್ತು ಇತರ ಸ್ಥಳಗಳನ್ನು ಗುರಿಯಾಸಿ ಇಸ್ರೇಲ್‌ ಇತ್ತೀಚೆಗೆ ನಡೆಸಿದ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳುವ ತವಕವನ್ನು ಖಮೇನಿ ಈ ಮೂಲಕ ವ್ಯಕ್ತಪಡಿಸಿದ್ದಾರೆ.

ಎರಡೂ ಕಡೆಯಿಂದ ನಡೆಯುವ ಯಾವುದೇ ಹೆಚ್ಚಿನ ದಾಳಿಗಳು ಯುದ್ಧವನ್ನು ಮತ್ತಷ್ಟು ವ್ಯಾಪಕಗೊಳಿಸುವ ಮತ್ತು ಮಧ್ಯಪ್ರಾಚ್ಯದಾದ್ಯಂತ ಆವರಿಸುವ ಸಾಧ್ಯತೆಯಿದೆ.

ADVERTISEMENT

ಈಗಾಗಲೇ ಗಾಜಾ ಪಟ್ಟಿಯಲ್ಲಿ ಇಸ್ರೇಲ್‌– ಹಮಾಸ್‌ ನಡುವಿನ ಯುದ್ಧ, ಲೆಬನಾನ್‌ ಮೇಲಿನ ಇಸ್ರೇಲ್‌ ಆಕ್ರಮಣದಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗುತ್ತಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಇದು ವಿಶಾಲ ಪ್ರಾದೇಶಿಕ ಸಂಘರ್ಷವಾಗಿ ಪರಿಣಮಿಸುವ ಸಾಧ್ಯತೆಯಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

‘ಶತ್ರು ರಾಷ್ಟ್ರಗಳು ಇಸ್ರೇಲ್‌ ಆಗಿರಲಿ ಅಥವಾ ಅಮೆರಿಕವೇ ಆಗಿರಲಿ, ಇರಾನ್‌ ಮತ್ತು ಅದರ ಮಿತ್ರ ರಾಷ್ಟ್ರಗಳ ವಿರುದ್ಧ ಮಾಡುತ್ತಿರುವ ದಾಳಿಗಳಿಗೆ ಪ್ರತಿಯಾಗಿ ತೀವ್ರ ಪ್ರತಿದಾಳಿ ಎದುರಿಸಬೇಕಾಗುತ್ತದೆ’ ಎಂದು ಖಮೇನಿ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಈ ಕುರಿತ ಅವರ ವಿಡಿಯೊವನ್ನು ಇರಾನ್‌ ಸರ್ಕಾರಿ ಮಾಧ್ಯಮ ಬಿಡುಗಡೆ ಮಾಡಿದೆ.

ಆದರೆ, ಈ ದಾಳಿಯು ಯಾವಾಗ ನಡೆಯುತ್ತದೆ ಮತ್ತು ಅದರ ವ್ಯಾಪ್ತಿ ಎಷ್ಟಿರಬಹುದು ಎಂಬುದನ್ನು ಖಮೇನಿ ವಿವರಿಸಿಲ್ಲ. ಅಮೆರಿಕದ ದೀರ್ಘ ಶ್ರೆಣಿಯ ಬಿ–52 ಬಾಂಬರ್‌ಗಳು, ಟ್ಯಾಂಕರ್‌ಗಳು ಸೇರಿದಂತೆ ಭಾರಿ ಪ್ರಮಾಣದ ಯುದ್ಧೋಪಕರಣಗಳು ಮಧ್ಯಪ್ರಾಚ್ಯ ತಲುಪಿದ ಬೆನ್ನಲ್ಲೇ ಖಮೇಲಿ ಅವರಿಂದ ತೀವ್ರ ಪ್ರತಿರೋಧದ ಕುರಿತ ಪ್ರತಿಕ್ರಿಯೆ ಬಂದಿದೆ.

ಪತ್ರಕರ್ತನ ಬಂಧನ

ಅಮೆರಿಕನ್‌ ಪತ್ರಕರ್ತನನ್ನು ಇರಾನ್‌ ತಿಂಗಳುಗಳಿಂದ ಬಂಧಿಸಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಪತ್ರಕರ್ತ ರೆಜಾ ವಲಿಜಾಡೆ ಅವರನ್ನು ಇರಾನ್‌ ಬಂಧಿಸಿರುವ ಕುರಿತು ಮಾಹಿತಿಯನ್ನು ಅಮೆರಿಕ ವಿದೇಶಾಂಗ ಸಚಿವಾಲಯ ದೃಢಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.