ADVERTISEMENT

ಕಟು ಪ್ರತೀಕಾರ ಕಾದಿದೆ: ಅಮೆರಿಕಕ್ಕೆ ಇರಾನ್ ನಾಯಕ ಖಮೇನಿ ಎಚ್ಚರಿಕೆ

ಏಜೆನ್ಸೀಸ್
Published 3 ಜನವರಿ 2020, 9:00 IST
Last Updated 3 ಜನವರಿ 2020, 9:00 IST
ಇರಾನ್‌ ನಾಯಕ ಆಯತೊಲ್ಲಾ ಅಲಿ ಖಮೇನಿ
ಇರಾನ್‌ ನಾಯಕ ಆಯತೊಲ್ಲಾ ಅಲಿ ಖಮೇನಿ   

ತೆಹರಾನ್:ಸೇನಾಧಿಕಾರಿಯ ಹತ್ಯೆಯಿಂದ ಸಿಟ್ಟಿಗೆದ್ದಿರುವ ಇರಾನ್‌ನ ಪರಮೋಚ್ಚ ನಾಯಕ ಅಲಿ ಖಮೇನಿ ‘ನಿಮ್ಮ ದುಸ್ಸಾಹಸಗಳಿಗೆ ತಕ್ಕ ಬೆಲೆ ತೆರಲಿದ್ದೀರಿ. ಕಟು ಪ್ರತೀಕಾರ ನಿಮಗೆ ಕಾದಿದೆ’ ಎಂದು ಎಚ್ಚರಿಸಿದ್ದಾರೆ. ಬಾಗ್ದಾದ್‌ನಲ್ಲಿ ಶುಕ್ರವಾರ ರಾಕೆಟ್ ನಡೆಸಿಇರಾನ್‌ಸೇನಾಧಿಕಾರಿ ಮೇಜರ್ ಜನರಲ್ ಖಾಸಿಂ ಸೋಲಿಮನಿ ಅವರನ್ನು ಅಮೆರಿಕ ಹತ್ಯೆ ಮಾಡಿತ್ತು.

‘ಪವಿತ್ರ ಯುದ್ಧದಲ್ಲಿ ಸಕ್ರಿಯರಾಗಿರುವ ನಮ್ಮ ಹೋರಾಟಗಾರರು ಇನ್ನು ಮುಂದೆ ದುಪ್ಪಟ್ಟು ಯದ್ಧೋತ್ಸಾಹದೊಂದಿಗೆ ಕಣಕ್ಕಿಳಿಯುತ್ತಾರೆ. ಅಂತಿಮ ಜಯ ನಮ್ಮದೇ’ ಎಂದು ರಾಯಿಟರ್ಸ್‌ ಸುದ್ದಿಸಂಸ್ಥೆಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಖಮೇನಿ ತಿಳಿಸಿದ್ದಾರೆ. ಖಾಸಿಂ ಸೋಲಿಮನಿ ಗೌರವಾರ್ಥ ಇರಾನ್‌ನಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ.

‘ಖಾಸಿಂ ಸೋಲಿಮನಿ ಅವರನ್ನು ಕೊಲ್ಲುವ ನಿರ್ಧಾರ ತೆಗೆದುಕೊಂಡು ಅಮೆರಿಕ ತಪ್ಪು ಮಾಡಿದೆ. ಅತಿಮೂರ್ಖತನದ ಈ ನಿರ್ಧಾರದಿಂದ ಎರಡೂ ದೇಶಗಳ ಸಂಬಂಧ ಇನ್ನಷ್ಟು ಹಳಸಲಿದೆ’ ಎಂದು ಇರಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಮೊಹಮದ್ ಜಾವೆದ್ ಝರೀಫ್ ವಿಶ್ಲೇಷಿಸಿದ್ದಾರೆ.

ADVERTISEMENT

‘ಸೋಲಿಮನಿ ಅವರನ್ನು ಗುರಿಯಾಗಿಸಿದ್ದುಅಮೆರಿಕದ ಜಾಗತಿಕ ಭಯೋತ್ಪಾದನೆಯ ಕೃತ್ಯ. ಐಸಿಸ್ (ಇಸ್ಲಾಮಿಕ್ ಸ್ಟೇಟ್) ಅಲ್‌ ನುಸ್ರಾ, ಅಲ್‌ ಖೈದಾ ಇತ್ಯಾದಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಪರಿಣಾಮಕಾರಿಯಾಗಿ ಹೋರಾಡುತ್ತಿದ್ದವರು ಜನರಲ್ ಸೋಲಿಮನಿ. ಈ ಬೇಕಾಬಿಟ್ಟಿ ನಿರ್ಧಾರ ಮತ್ತು ಅದರ ಪರಿಣಾಮಗಳನ್ನು ಅಮೆರಿಕ ಅನುಭವಿಸಲಿದೆ’ ಎಂದು ಝರೀಫ್‌ ಟ್ವೀಟ್‌ ಮಾಡಿದ್ದಾರೆ.

ಸೋಲಿಮನಿ ಹತ್ಯೆಯಿಂದಇರಾನ್ ಮತ್ತು ಅಮೆರಿಕ ಸಂಬಂಧ ಪೂರ್ಣಹಳಸಿದಂತೆ ಆಗಿದೆ. ಹೇಗಾದರೂ ಮಾಡಿ ಇರಾನ್‌ ದೇಶವನ್ನು ಮಣಿಸಲೇಬೇಕೆಂದು ನಿರ್ಧರಿಸಿರುವಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಈ ಮೊದಲು ಆರ್ಥಿಕ ನಿರ್ಬಂಧಗಳನ್ನು ಅಸ್ತ್ರವಾಗಿಸಿಕೊಂಡಿದ್ದರು. ಈಗ ಸೇನಾಧಿಕಾರಿಯ ಮೇಲೆ ಮಿಲಿಟರಿ ದಾಳಿ ನಡೆಸುವಮೂಲಕ ನೇರವಾಗಿ ತೊಡೆತಟ್ಟಿದಂತೆ ಆಗಿದೆ.

ಎಚ್ಚರಿಕೆ ನೀಡಿದ್ದ ಅಮೆರಿಕ

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್‌ ಟಿ. ಎಸ್ಪರ್‌, ‘ಅಮೆರಿಕ ಸೇನೆಯು ಮುನ್ನೆಚ್ಚರಿಕೆ ಕ್ರಮವಾಗಿ ದಾಳಿ ಮಾಡಬಹುದು’ ಎಂದು ಎಚ್ಚರಿಸಿದ್ದ ಒಂದು ದಿನದ ತರುವಾಯ ಈ ದಾಳಿ ನಡೆದಿದೆ.

‘ಅಮೆರಿಕ ಹಿತಾಸಕ್ತಿಗಳಿಗೆ ಧಕ್ಕೆಯೊದಗಿದರೆ ಅಥವಾ ಅಮೆರಿಕ ರಕ್ಷಣಾ ಸಿಬ್ಬಂದಿ ಮೇಲೆ ಇನ್ನಷ್ಟು ದಾಳಿಗೆ ಇರಾನ್‌ ಬೆಂಬಲಿತ ಸಶಸ್ತ್ರ ಹೋರಾಟಗಾರರು ಯೋಜನೆ ರೂಪಿಸಿದರೆ,ಇರಾಕ್ ಮತ್ತು ಸಿರಿಯಾದಲ್ಲಿ ಮುನ್ನೆಚ್ಚರಿಕೆ ದಾಳಿ ನಡೆಸಲು ನಾವು ಹಿಂಜರಿಯುವುದಿಲ್ಲ’ ಎಂದು ಮಾರ್ಕ್‌ ಟಿ. ಎಸ್ಪರ್ಹೇಳಿದ್ದರು.

ಸೋಲೊಮನಿ ಜೊತೆಗೆ ಇರಾಕ್‌ನಲ್ಲಿರುವ ಇರಾನ್ ಬೆಂಬಲಿತ ಹೋರಾಟಗಾರರ ಗುಂಪಿನ ಮುಖ್ಯ ನಾಯಕ ಅಬು ಮಹ್ದಿ ಅಲ್ ಮುಹಂದಿಸ್ ಸಹ ಈ ದಾಳಿಯನ್ನು ಮೃತಪಟ್ಟಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.