ADVERTISEMENT

ನಾಸಾ ಪೈಲಟ್‌ ಸುನಿತಾ ವಿಲಿಯಮ್ಸ್ ಆರೋಗ್ಯದ ಬಗ್ಗೆ ಎದ್ದಿದ್ದ ವದಂತಿ ನಿಜವೇ?

ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಅವರ ಆರೋಗ್ಯದ ಬಗ್ಗೆ ವದಂತಿ ಎದ್ದಿತ್ತು.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ನವೆಂಬರ್ 2024, 10:30 IST
Last Updated 18 ನವೆಂಬರ್ 2024, 10:30 IST
<div class="paragraphs"><p>ಸುನಿತಾ ವಿಲಿಯಮ್ಸ್</p></div>

ಸುನಿತಾ ವಿಲಿಯಮ್ಸ್

   

ಬೆಂಗಳೂರು: ಬಾಹ್ಯಾಕಾಶ ನೌಕೆಯ ತಾಂತ್ರಿಕ ದೋಷದಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿಕೊಂಡಿರುವ ನಾಸಾ ಪೈಲಟ್‌, ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಅವರ ಆರೋಗ್ಯದ ಬಗ್ಗೆ ವದಂತಿ ಎದ್ದಿತ್ತು.

ನಿಗದಿತ ದಿನಗಳಿಗಿಂತ ಹೆಚ್ಚು ದಿನ ಬಾಹ್ಯಾಕಾಶದಲ್ಲಿದ್ದಿದ್ದು ಹಾಗೂ ಪ್ರತಿಕೂಲ ಪರಿಸ್ಥತಿಯಿಂದ ಸುನಿತಾ ವಿಲಿಯಮ್ಸ್ ಅವರ ಆರೋಗ್ಯದಲ್ಲಿ ಭಾರಿ ಏರುಪೇರಾಗಿದೆ ಎನ್ನಲಾಗಿತ್ತು. ಇದಕ್ಕೆ ಕಾರಣ ಅವರ ಫೋಟೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು.

ADVERTISEMENT

ಈ ಫೋಟೊದಲ್ಲಿ ಸುನಿತಾ ಅವರು ದೇಹದ ತೂಕ ಗಮನಾರ್ಹ ಇಳಿಕೆ ಕಂಡು ಬಂದಿತ್ತು. ಅಲ್ಲದೇ ಕೂದಲು ವಿಕಾರವಾಗಿ ಮಾಂಸ ಖಂಡಗಳೂ ದುರ್ಬಲವಾಗಿವೆ ಎಂಬಂತೆ ತೋರುತ್ತಿತ್ತು. ಇದರಿಂದ ಭಾರತೀಯರೂ ಸೇರಿದಂತೆ ಅನೇಕ ವಿಜ್ಞಾನ ಪ್ರಿಯರು ಚಿಂತೆಗೀಡಾಗಿದ್ದರು.

ಆದರೆ, ನಾಸಾ ಇತ್ತೀಚೆಗೆ ಸುನಿತಾ ಅವರ ಹೊಸ ಚಿತ್ರವನ್ನು ಹಂಚಿಕೊಂಡಿದ್ದು ಅದರಲ್ಲಿ ಸುನಿತಾ ಸಾಮಾನ್ಯರಂತೆ ಕಂಡು ಬಂದಿದ್ದಾರೆ. ಈ ಮೂಲಕ ಅವರ ಆರೋಗ್ಯದ ಬಗ್ಗೆ ಎದ್ದಿದ್ದ ಉಹಾಪೊಹಗಳ ಬಗ್ಗೆ ತೆರೆ ಬಿದ್ದಿದೆ.

ಆರೋಗ್ಯ ಕಾಯ್ದುಕೊಳ್ಳುವ ಸವಾಲಿನ ನಡುವೆಯೇ ಸುನಿತಾ ಅವರು ಬಾಹ್ಯಾಕಾಶ ಸಂಶೋಧನೆಯ ಅದ್ಭುತ ಕೆಲಸಗಳನ್ನು ಮುಂದುವರೆಸಿದ್ದಾರೆ ಎನ್ನಲಾಗಿದೆ.

ಈ ವರ್ಷ ಜೂನ್‌ ಮೊದಲ ವಾರದಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ ಎರಡು ವಾರಗಳ ಬಳಿಕ ಭೂಮಿಗೆ ಹಿಂದಿರುಗಬೇಕಿದ್ದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಸದ್ಯ ಭೂಮಿಗೆ ಬರಲು ಸಾಧ್ಯವಾಗಿಲ್ಲ. ಅವರನ್ನು 2025ರ ಜನವರಿಯಲ್ಲಿ ಭೂಮಿಗೆ ವಾಪಸ್ ಕರೆತರುವ ಯೋಜನೆಯನ್ನು ನಾಸಾ ಹಾಕಿಕೊಂಡಿದೆ.

‘ನಮಗೆ ಯಾವುದೇ ತೊಂದರೆಯಿಲ್ಲ. ನಾಸಾ ನಮ್ಮನ್ನು ಭೂಮಿಗೆ ಸುರಕ್ಷಿತವಾಗಿ ಕರೆತರುತ್ತದೆ ಎಂಬ ವಿಶ್ವಾಸವಿದೆ’ ಎಂದು ಸುನೀತಾ ವಿಲಿಯಮ್ಸ್ ಈ ಹಿಂದೆ ಸುದ್ದಿಗಾರರಿಗೆ ತಿಳಿಸಿದ್ದರು.

ಬೋಯಿಂಗ್ ನೌಕೆಯ ಹೀಲಿಯಂ ಸೋರಿಕೆ ಮತ್ತು ಥ್ರಸ್ಟರ್‌ನಲ್ಲಿನ ವೈಫಲ್ಯದಿಂದಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಅವರು ಹಿಂದಿರುಗುವುದು ತಡವಾಗಿದೆ. ಇತ್ತೀಚೆಗೆ ಬೋಯಿಂಗ್ ನೌಕೆ ಈ ಇಬ್ಬರನ್ನೂ ಅಲ್ಲಿಯೇ ಬಿಟ್ಟು ಭೂಮಿಗೆ ವಾಪಸ್ ಆಗಿದೆ. ಸ್ಪೇಸ್ ಎಕ್ಸ್‌ನ ಸ್ಟಾರ್‌ಲೈನರ್ ಮೂಲಕ ಅವರು ಜನವರಿಯಲ್ಲಿ ಭೂಮಿಗೆ ಬರಬಹುದು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.