ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಸ್ಥಾಪಕ ಅಬು ಬಕರ್ ಅಲ್ ಬಾಗ್ದಾದಿ ಶನಿವಾರ ಅಮೆರಿಕ ಸೇನೆಯ ವಿಶೇಷ ಪಡೆಗಳ ಕಾರ್ಯಚರಣೆಯಲ್ಲಿ ಸ್ವತಃ ತನ್ನನ್ನೇ ತಾನು ಸ್ಫೋಟಿಸಿಕೊಂಡು ಸತ್ತಿದ್ದಾನೆ. ಅಮೆರಿಕ ಅಧ್ಯಕ್ಷ ಟ್ರಂಪ್ ಮಾಧ್ಯಮಗಳ ಎದುರು ನಿಂತು ಬಾಗ್ದಾದಿ ಸಾವಿನ ಸುದ್ದಿಯನ್ನುಇಡೀ ವಿಶ್ವಕ್ಕೇ ಸಾರಿದರು.
ಇಸ್ಲಾಂ ರಾಷ್ಟ್ರ ಕಟ್ಟಿಕೊಳ್ಳುವ ಹಠಕ್ಕೆ ಬಿದ್ದಿದ್ದ ಬಾಗ್ದಾದಿ ತನ್ನ ಭಯೋತ್ಪಾದನಾ ಕೃತ್ಯಗಳ ಮೂಲಕ ಜಗತ್ತನ್ನು ಸದಾ ಭೀತಿಯಲ್ಲಿರುವಂತೆ ಮಾಡಿದ್ದ. ಅದೇ ವೇಳೆ ಮೂಲಭೂತವಾದ ಪ್ರತಿಪಾದಿಸುತ್ತ, ಧರ್ಮದ ಹೆಸರಿನಲ್ಲಿ ಮಹಿಳೆಯರ ಮೇಲೆ ಅನಾಗರಿಕ ಸಂಪ್ರದಾಯಗಳನ್ನು ಬಲವಂತವಾಗಿ ಹೇರುತ್ತಿದ್ದ. ಅವುಗಳಲ್ಲೊಂದು ಜನನಾಂಗ ಛೇದನ. ಇದು ಮಹಿಳೆಯರ ಮೇಲೆ ನಡೆಸಲಾಗುವುವ ಅತ್ಯಂತ ಹೇಯ, ಅಮಾನವೀಯ ಕೃತ್ಯವೇ ಸರಿ.
ತನ್ನ ಕಾರ್ಯಕ್ಷೇತ್ರವಾಗಿದ್ದ ಇರಾಕ್‌ನಲ್ಲಿ ಇರುವ 11ರಿಂದ 46 ವಯಸ್ಸಿನೊಳಗಿನ ಎಲ್ಲ ಮಹಿಳೆಯರು ಕಡ್ಡಾಯವಾಗಿ ‘ಜನನಾಂಗ ಛೇದನ’ ಮಾಡಿಸಿಕೊಳ್ಳಬೇಕು ಎಂದು ಬಗ್ದಾದಿಯ ರಕ್ಕಸ ಸಂಘಟನೆ 2014ರಲ್ಲಿ ಫತ್ವಾ ಹೊರಡಿಸಿತ್ತು.
ಇರಾಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಶ್ವಸಂಸ್ಥೆಯ ಹಿರಿಯ ಅಧಿಕಾರಿ ಜಾಕ್ವೇಲಿನ್ ಬ್ಯಾಡ್‌ಕಾಕ್ ಅವರು ಈ ಕುರಿತು ಜಗತ್ತಿಗೆ ಮೊದಲ ಬಾರಿಗೆ ಮಾಹಿತಿ ನೀಡಿದ್ದರು.
ಇರಾಕ್ ಹಾಗೂ ಸಿರಿಯಾದಲ್ಲಿ ಮುಸ್ಲಿಂ ಪ್ರಾಬಲ್ಯ ಇರುವ ಕೆಲ ಪ್ರದೇಶಗಳನ್ನು ಒಗ್ಗೂಡಿಸಿ, ಪ್ರತ್ಯೇಕ ಇಸ್ಲಾಂ ರಾಷ್ಟ್ರವನ್ನು ಆಗಷ್ಟೇ ಘೋಷಿಸಿಕೊಂಡಿದ್ದ ಬಾಗ್ದಾದಿ ತನ್ನ ಸಂಘಟನೆ ಐಎಸ್‌ಐಎಸ್ ಮೂಲಕ ಈ ಫತ್ವಾ ಹೊರಡಿಸಿದ್ದ.
ಲೈಂಗಿಕ ಆಸಕ್ತಿ ಕುಂದಿಸುವ ಉದ್ದೇಶದಿಂದ ಹೊರಡಿಸಲಾಗಿದ್ದ ‘ಜನನಾಂಗ ಛೇದನ ಫತ್ವಾ ಆದೇಶ ಇರಾಕ್‌ನ 40 ಲಕ್ಷ ಯುವತಿಯರಿಗೆ ಮತ್ತು ಮಹಿಳೆಯರನ್ನು ಆತಂಕಕ್ಕೆ ದೂಡಿತ್ತು. ಹಲವರು ತೊಂದರೆಗೂ ಗುರಿಯಾಗಿದ್ದರು. ಸಂಪ್ರದಾಯದ ಹೆಸರಿನಲ್ಲಿ ಜಾರಿಗೆ ತರಲಾಗಿದ್ದ ಈ ಅಮಾನವೀಯ ಪದ್ಧತಿ ಐಎಸ್‌ಐಸ್‌ನ ಬಿಗಿ ಹಿಡಿತವಿದ್ದ ಕೆಲ ಪ್ರಾಂತ್ಯಗಳಲ್ಲಿ ಹೆಚ್ಚಾಗಿ ನಡೆಯುತಿತ್ತು. ಅದರಲ್ಲೂ ಮುಖ್ಯವಾಗಿ ‘ಐಎಸ್‌ಐಎಸ್’ ತನ್ನ ರಾಜಧಾನಿಯಾಗಿ ಘೋಷಿಸಿಕೊಂಡಿದ್ದ ಮೊಸುಲ್ ನಗರದಲ್ಲಿ ಈ ಪದ್ಧತಿ ಕಡ್ಡಾಯವಾಗಿ ಜಾರಿಯಲ್ಲಿತ್ತು ಎಂದು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿ ಜಾಕ್ವೇಲಿನ್ ಅವರು 2014ರಲ್ಲಿ ತಿಳಿಸಿದ್ದರು.
ತಮ್ಮ ಮೇಲೆ ನಡೆಯುತ್ತಿದ್ದ ಅಮಾನವೀಯ ಕೃತ್ಯದ ಬಗ್ಗೆ ಮಹಿಳೆಯರು ಹೊರಗಿನ ಪ್ರಪಂಚಕ್ಕೆ ಹೇಳುವಂತೆಯೂ ಇರಲಿಲ್ಲ. ಹಾಗೊಂದುವೇಳೆ ಇಂಥ ವಿಚಾರವನ್ನು ಬಹಿರಂಗಗೊಳಿಸಿದರೆ ಆಕೆಯ ತಂದೆ, ಸೋದರ, ಪತಿಯೇ ಹೊಡೆದು ಕೊಲ್ಲುತ್ತಿದ್ದ ಎಂಬ ಸಂಗತಿಗಳು ಬಯಲಾಗಿದ್ದವು.
ಮಹಿಳೆಯರ ಜನನಾಂಗ ಛೇದನ ಎಂಬ ಪದ್ಧತಿಯನ್ನು ಬಾಗ್ದಾದಿಯ ಸಂಘಟನೆ ಐಎಸ್ 2014ರಲ್ಲಿ ತನ್ನ ಪ್ರಭಾವವಿರುವ ಪ್ರದೇಶದಲ್ಲಿ ಕಡ್ಡಾಯಗೊಳಿಸಿತ್ತಾದರೂ, ಮಧ್ಯಪ್ರಾಚ್ಯದಲ್ಲಿ ಈ ಪದ್ಧತಿ ಜಾರಿಯಲ್ಲಿತ್ತು. ಆದರೆ, ಅದನ್ನು ಕಡ್ಡಾಯಗೊಳಿಸಿದ್ದು ಮಾತ್ರ ಬಾಗ್ದಾದಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.